ರಾಜ್ಯದಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಬಜೆಟ್‌ನಲ್ಲಿ ಹಣ ಮೀಸಲಿಡುವುದು ಸೇರಿದಂತೆ ಸ್ಲಂ ಕಾಯಿದೆಗೆ ವಿರುದ್ಧವಾಗಿರುವ ವಸತಿ ಇಲಾಖೆ ಸುತ್ತೋಲೆ ವಾಪಾಸಾತಿ ಹಾಗೂ ಲ್ಯಾಂಡ್ ಬ್ಯಾಂಕ್ ನೀತಿ ಕುರಿತಂತೆ ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಈಗಾಗಲೇ ಸಮಯ ನಿಗದಿಯಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ತಿಳಿಸಿದರು.
\ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯಿಂದ ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ನಿವಾಸಿಗಳ ಹಕ್ಕೋತ್ತಾಯ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆ ನೋಂದಣಿ ಮತ್ತು ಇ.ಖಾತಾ ಪ್ರಕ್ರಿಯೆಯನ್ನು ಸರಳಗೊಳಿಸಿ ಖಾಸಗಿ ಸ್ಲಂಗಳ ಅಭಿವೃದ್ಧಿಗೂ ಮುಂದಾಗುವ ಜೊತೆಗೆ ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ವಸತಿ ಯೋಜನೆಯನ್ನು ಪೂರ್ಣಗೊಳಲು ಹಣ ಮಂಜೂರಾತಿ ಸೇರಿದಂತೆ ಸ್ಲಂ ಜನರ ಪರವಾದ ಕಾನೂನು ಮತ್ತು ನೀತಿಗಳನ್ನು ನನ್ನ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರ ಬೆಂಬಲದೊಂದಿಗೆ ಮಾಡುವ ಭರವಸೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಡಾ.ಅಶೋಕ್ ಮನವಿ ಸ್ವೀಕರಿಸಿ ಮಾತನಾಡಿದರು. ಈಗಾಗಲೇ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿಗೆ ಇ-ಖಾತಾ ತೊಡಕಾಗಿರುವ ಬಗ್ಗೆ ಮುದ್ರಾಂಕ ಇಲಾಖೆಯ ಎಐಜಿ ಅವರೊಂದಿಗೆ ಸಭೆ ನಡೆಸಿ 94ಸಿಸಿ ಮಾದರಿಯಲ್ಲಿ ನೋಂದಣಿ ಮಾಡಿಕೊಡಲು ಒಪ್ಪಿಸಲಾಗಿದೆ. ಹಾಗೆ ಇದುವರೆಗೂ 1.86 ಲಕ್ಷ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಲಾಗಿದೆ ಎಂದರು.
ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ನಗರಗಳಲ್ಲಿ ಅಸಮಾನತೆ ಮತ್ತು ಅಭಿವೃದ್ಧಿ ತಾರತಮ್ಯದಿಂದ ಕೊಳಚೆ ಪ್ರದೇಶದಲ್ಲಿರುವ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಪಕ್ಷದ ಭರವಸೆಯ ಮೇಲೆ ಸ್ಲಂ ನಿವಾಸಿಗಳು ಈ ಸರ್ಕಾರವನ್ನು ಆಯ್ಕೆ ಮಾಡಿದ್ದು ವಸತಿ ಹಕ್ಕು ಕಾಯಿದೆ, ನಗರ ಉದ್ಯೋಗ ಖಾತ್ರಿ ಕಾಯಿದೆ, ಹೊಸ ಸ್ಲಂ ಕಾಯಿದೆ ಸೇರಿದಂತೆ ನಿವೇಶನ ರಹಿತರಿಗೆ ವಿಶೇಷ ವರ್ಗಗಳಿಗೆ ವಸತಿ ಕಲ್ಪಿಸಲು ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯನ್ನು ತುರ್ತಾಗಿ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಇಮ್ತಿಯಾಜ್ ಆರ್ ಮಾನ್ವಿ, ಹುಬ್ಬಳ್ಳಿಯ ಶೋಭ ಕಮತಾರ್, ಬೆಳಗಾವಿಯ ಫಕೀರಪ್ಪ ತಳವಾರ್, ಬೆಂಗಳೂರಿನ ಚಂದ್ರಮ್ಮ, ರಾಯಚೂರಿನ ಜನಾರ್ಧನ್ ಹಳ್ಳಿಬೆಂಚಿ, ದಾವಣಗೆರೆಯ ರೇಣುಕ ಎಲ್ಲಮ್ಮ, ತುಮಕೂರಿನ ಅರುಣ್, ಹೊಸಪೇಟೆಯ ವೆಂಕಮ್ಮ, ಬಳ್ಳಾರಿಯ ಶೇಖರ್ ಬಾಬು, ಬಿಜಾಪುರದ ಅಕ್ರಮ್ ಮಶಾಲ್ಕರ್, ಕಲ್ಬುರ್ಗಿಯ ರೇಣುಕ ಸರಡಗಿ ಇದ್ದರು.