ತಿಪಟೂರನ್ನು ಬರೀ ತಿಪಟೂರು ಅಂದರೆ ಸಾಲದು, ತಿಪಟೂರು ಸೀಮೆ ಅನ್ನಬೇಕು. ಯಾಕೆಂದರೆ ಅದು ಬರೀ ಒಂದು ಊರಿನ ಹೆಸರಾಗದೆ, ಬದಲಿಗೆ ಒಂದು ಜೀವನ ವಿಧಾನದ ಹೆಸರಾಗಿದೆ ನಮ್ಮದು ಮುದ್ದೆ ಸೀಮೆ. ನಮ್ಮ ಮುದ್ದೆ ಸೀಮೆಯ ಜೀವನ ಮೀಮಾಂಸೆ ಬೇರೆ ಎಂದು ಚಿಂತಕ ನಟರಾಜ್ ಬೂದಾಳ್ ತಿಳಿಸಿದರು.
ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಹಮ್ಮಿಕೊಂಡಿದ್ದ 6 ನೇ ತಿಪಟೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಶಿವ ಸಂಸ್ಕೃತಿ, ತಾಯಿ ಸಂಸ್ಕೃತಿ, ಜಲ ಸಂಸ್ಕೃತಿ, ಚಂದ್ರ ಸಂಸ್ಕೃತಿ ಮತ್ತು ನಾಗ ಸಂಸ್ಕೃತಿ ನಮ್ಮ ಜೀವನ ಮೀಮಾಂಸೆಯ ಲಕ್ಷಣಗಳಾಗಿದ್ದು, ಇವು ದಿನ ನಿತ್ಯ ಮರೆವಿಗೆ ಸಲ್ಲುತ್ತಿವೆ. ಅಸ್ತಿತ್ವವನ್ನು ಕಳೆದುಕೊಂಡ ಬದುಕು ಜೀತದ ಬದುಕಿಗೆ ಸಮಾನವಾಗಿದ್ದು, ಶಿವ ಸಂಸ್ಕೃತಿಯನ್ನು ತಿರಸ್ಕರಿಸಲು ಪಿತೃ ಸಂಸ್ಕೃತಿ, ಶಿವ ಸಂಸ್ಕೃತಿಯನ್ನು ತಿರಸ್ಕರಿಸಲು ವೈಷ್ಣವ ಸಂಸ್ಕೃತಿ, ನೀರಿನ ಸಂಸ್ಕೃತಿಯನ್ನು ತಿರಸ್ಕರಿಸಲು ಅಗ್ನಿ ಸಂಸ್ಕೃತಿ, ನಾಗ ಸಂಸ್ಕೃತಿಯನ್ನು ತಿರಸ್ಕರಿಸಲು ಗರುಡ ಸಂಸ್ಕೃತಿಗಳನ್ನು ಮುಂದಿಡಲಾಗುತ್ತಿದೆ. ಇವೆಲ್ಲ ನಮಗೇ ಗೊತ್ತಾಗದೆ ನಮ್ಮನ್ನು ಪರದೇಸಿಗಳನ್ನಾಗಿಸುವ ಹುನ್ನಾರು ನಡೆಯುತ್ತಿದೆ ನಮ್ಮ ಸಾಂಸ್ಕೃತಿಕ ಚಹರೆಗಳು ದುರ್ಬಲಗೊಳ್ಳದ ಹಾಗೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ ಎಂದು ತಿಳಿಸಿದರು.
ಈ ನೆಲದ ಸಾಹಿತ್ಯಕ್ಕೆ ಒಂದು ವಿಶೇಷ ಗುಣವಿದ್ದು ಅದು ಬಹುತ್ವವನ್ನು, ಎಲ್ಲ ತಾರತಮ್ಯಗಳನ್ನು ದಾಟಿದ ಸಮಾನತೆಯನ್ನು, ಎಲ್ಲರನ್ನೂ ಬಾಳಿಸಿಕೊಂಡು ಬಾಳಿದರೆ ಮಾತ್ರ ತನಗೂ ಬಾಳುವೆ ಎನ್ನುವ ಲೋಕಸಾಮರಸ್ಯವನ್ನು, ಮತ್ತು ಎಲ್ಲರೊಡನೆ ಹಂಚಿಕೊಂಡು ಬಾಳುವ ಪ್ರಜಾಸತ್ತೆಯನ್ನು ಪ್ರತಿಪಾದಿಸಿಕೊಂಡು ಬಂದಿದೆ. ಇಲ್ಲಿನ ಪುರಾತನರು ಮತ್ತು ಆಧುನಿಕರು ಇಬ್ಬರಲ್ಲಿಯೂ ಸಹ ಇದೆ ಎಂದರು.
ತಿಪಟೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಕನ್ನಡ ಶಾಲೆಗಳು ಮುಚ್ಚುತ್ತಿವೆ, ಬೆಳೆ ಬೆಳೆಯುವ ಮಣ್ಣು ಸಾಯುತ್ತಿದೆ, ರಾಜಕಾರಣ ಮಾಡುವ ರಾಜಕಾರಣಿಗಳ ಮನಸ್ಸುಗಳು ಹಾಗೂ ನಡತೆಗಳು ಬದಲಾಗಬೇಕಿದೆ, ಕಲ್ಪತರು ನಾಡಿನ ತೆಂಗು ನಾಶವಾಗುತ್ತಿದೆ. ಇವೆಲ್ಲದರ ನಡುವೆ ಕನ್ನಡ ಭಾಷೆಯು ಉಳಿದು ಬೆಳೆದು ನಿಲ್ಲಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚೀನ ವರದಿಗಳ ಪ್ರಕಾರ ಶಿಕ್ಷಕರು ಹಾಗೂ ಮಕ್ಕಳಿಲ್ಲದೆ 2350 ಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿದ್ದು, ನಾಡಿನಲ್ಲಿ ಕೃಷಿಗೆ ಘನತೆಯಿಲ್ಲದಂತಾಗಿದೆ. ರೈತಾಪಿ ವರ್ಗ ಉದ್ವೇಗಕ್ಕೆ ಒಳಗಾಗುತ್ತಿದ್ದು ಏಕ ಬೆಳೆಯ ತೆಂಗು ನೀರಿಲ್ಲದೆ, 85 ರೋಗಗಳಿಂದ ನಾಶವಾಗುತ್ತಾ ಬರುತ್ತಿದ್ದು, ರಾಜಕಾರಣ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬರುತ್ತಿರುವ ರಾಜಕಾರಣಿಗಳ ಮನಸ್ಸುಗಳು ನೈತಿಕತೆಯಿಲ್ಲದೆ ಬರೀ ಒತ್ತಡದ ನಡುವಿನಲ್ಲಿ ನಗುವನ್ನು ಮರೆತು ಬದ್ದತೆಯನ್ನು ಕಳೆದುಕೊಂಡಿತ್ತಿದೆ ಇಂತಹ ಸಮಯದಲ್ಲಿ ಲಕ್ಷ ಲಕ್ಷ ಸಂಬಂಧಳ ಪಡೆಯುವ ಶಿಕ್ಷಕರು ಸಮಾಜವನ್ನು ವಿಧ್ಯಾರ್ಥಿಗಳನ್ನು ಸರಿದೂಗಿಸುವ ಕೆಲಸವನ್ನು ಹಾಗೂ ಸಾಹಿತ್ಯದ ಮನಸ್ಸುಗಳನ್ನು ಬೆಸೆಯುವ ಕೆಲಸವಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಸಕ ಕೆ.ಷಡಕ್ಷರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಆದ್ಯಕ್ಷ ಸಿದ್ದಲಿಂಗಪ್ಪ ಸೇರಿದಂತೆ ಹಲವರು ಇದ್ದರು.


