ಹಾವನೂರು, ಮಂಡಲ್ ಮತ್ತು ಚಿನ್ನಪ್ಪರೆಡ್ಡಿ ವರದಿಗಳನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಬಿಜೆಪಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ರಾಜೀವ್ ಗಾಂಧಿಯವರು ಮೀಸಲು ಸೌಲಭ್ಯ ಒದಗಿಸಿದ ಬಳಿಕ ಅಂದಿನ ರಾಜ್ಯಸಭೆ ಸದಸ್ಯ, ದಿವಂಗತ ರಾಮಾಜೋಯಿಸ್ ಅವರು ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋದರು ಎಂದು ಬಿಜೆಪಿಯ ನಿಲುವುಗಳನ್ನು ಟೀಕಿಸಿದ್ದಾರೆ.
ಯಾವುದೋ ಒಂದು ಜಾತಿ ಅಥವಾ ಜನಾಂಗದ ಪರವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಲ್ಲ. ಹೀಗಿರುವಾಗ ವರದಿಯನ್ನು ಸ್ವೀಕರಿಸಲು ರಾಜ್ಯದ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ವರದಿಯಲ್ಲಿ ಒಂದು ಜಾತಿಯ ಪರ ಏನಾದರೂ ಶಿಫಾರಸು ಮಾಡಲಾಗಿದೆಯೇ ? ಎಲ್ಲ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಅದನ್ನು ಸ್ವೀಕರಿಸಲು ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿರುವುದೇಕೆ ಎಂದಿದ್ದಾರೆ.
ಸಚಿವ ಈಶ್ವರಪ್ಪ ಅವರು ಹೊರಗಡೆ ಬಂದು ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು ಎನ್ನುತ್ತಾರೆ. ಈ ವಿಚಾರದಲ್ಲಿ ಅವರು ಒಂದು ದಿನವಾದರೂ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆಯೇ ? ಎಂದು ಕೆಣಕಿದ್ದಾರೆ.
ಆರ್ಥಿಕ ಸಮಾಜಿಕ ಸಮೀಕ್ಷೆ ವರದಿಯನ್ನು ಸಿದ್ದರಾಮಯ್ಯ ಅವರೇ ಬರೆಯಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿರುವುದು ಅಪ್ಪಟ ಸುಳ್ಳು. ವರದಿ ಇನ್ನೂ ಸರ್ಕಾರದ ಕೈಗೆ ಬಂದಿಲ್ಲ. ಹೀಗಿರುವಾಗ ವರದಿಯ ಬಗ್ಗೆ ಕುಮಾರಸ್ವಾಮಿ ಅವರಿಗೆ ಹೇಗೆ ಗೊತ್ತು? ಎಂದು ಟೀಕಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರ ನೆರವಿನಿಂದ ತಯಾರಿಸಿದ ವರದಿ ಅದು. ಖಾಸಗಿಯವರು ಮಾಡಿದ್ದಲ್ಲ. ಈ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಅದಕ್ಕೆ ಅಂಕಿ-ಅಂಶ ಅಗತ್ಯ. ಈ ಕಾರಣಕ್ಕಾಗಿಯೇ ವರದಿ ತಯಾರಿಸಲು ನಿರ್ಧರಿಸಲಾಗಿತ್ತು ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿರುವ ಹಿಂದುಳಿದ ವರ್ಗಗಳವರಿಗೆ ಬದ್ಧತೆ ಇರಬೇಕು. ಬದ್ಧತೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಲು ಸಾಧ್ಯ. ಇಲ್ಲದಿದ್ದರೆ ಅಧಿಕಾರ ಸಿಗುವ ಕಡೆ ಹೋಗುತ್ತಾರೆ. ಆ ರೀತಿ ಹೋದವರನ್ನು ಬಿಜೆಪಿಗೆ ಹೋಗಿರುವುದೇಕೆ ಎಂದು ಪ್ರಶ್ನಿಸಿದರೆ ಎಲ್ಲಿದ್ದರೂ ನಾನು ನಿಮ್ಮವನೇ ಅಣ್ಣ ಎನ್ನುತ್ತಾರೆ.


