ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅವರು ಆಗಸ್ಟ್ 20ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದ್ವಾರಕನಾಥ್ ಕಾಂಗ್ರೆಸ್ ಪಕ್ಷ ಸದಸ್ಯತ್ವ ಪಡೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದ್ವಾರಕನಾಥ್ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.
ಹಿಂದುಳಿದ ವರ್ಗಗಳ ಹೋರಾಟಗಾರ ಹಾಗೂ ಉಪನ್ಯಾಸಕ ಜಿ.ನಾಗಣ್ಣ ದಿ ನ್ಯೂಸ್ ಕಿಟ್ ಜೊತೆ ಮಾತನಾಡಿ ” ನಿನ್ನೆ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಡಾ.ದ್ವಾರಕನಾಥ್ ಅವರ ಜತೆ ಇದ್ದೆ. ಅವರು ಕಾಂಗ್ರೆಸ್ ಸೇರುವ ಮಾಹಿತಿ ಇರಲಿಲ್ಲ. ಆದರೆ ಆಗಸ್ಟ್ 20ರಂದು ಬೆಳಗ್ಗೆ ದ್ವಾರಕನಾಥ್ ಅವರು ಕಾಂಗ್ರೆಸ್ ಸೇರುವ ಮಾಹಿತಿ ಹರಿದಾಡಿತು. ಅವರ ಆಯ್ಕೆ ಸೂಕ್ತವಾಗಿದೆ’ ಎಂದರು.
“ಇಂದು ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಬಿಜೆಪಿ ವಿರುದ್ದ ಪ್ರಬಲ ಹೋರಾಟ ಮಾಡಬೇಕು. ಇಂತಹ ಸಂದರ್ಭದಲ್ಲಿ ದ್ವಾರಕನಾಥ್ ಅವರು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ. ಬಿಜೆಪಿಯ ಕೋಮುವಾದ ಮತ್ತು ಸಂಘಪರಿವಾರದ ಆಟಾಟೋಪವನ್ನು ನಿಯಂತ್ರಣ ಮಾಡಬೇಕೆಂದರೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗುರಿ ಸಾಧನೆ ಮಾಡಲು ಸಾಧ್ಯ” ಎಂದು ಜಿ.ಕೆ.ನಾಗಣ್ಣ ಅಭಿಪ್ರಾಯಪಟ್ಟರು.
“ಬಿಜೆಪಿ ಸೋಷಿಯಲ್ ಇಂಜಿನಿಯರಿಂಗ್ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಹಿಂದುಳಿದ ವರ್ಗಗಳ ಹೋರಾಟವನ್ನು ಹತ್ತಿಕ್ಕಿ ಸಂವಿಧಾನವನ್ನೇ ಅಪ್ರಸ್ತುತಗೊಳಿಸುವ ಕೆಲಸ ಮಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಂಘಟಿತ ಹೋರಾಟ ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.