ಮಾನಸಿಕ ಏಕತೆಯ ತತ್ವದಿಂದ ರಾಮಾಯಣ ಮಹಾಕಾವ್ಯ ವಿಶ್ವ ಕಥನವಾಯಿತು. ಇವತ್ತಿಗೆ ಬೇಕಾದ ರಾಜಕೀಯ ನೈತಿಕತೆಯ ಪಾಠವನ್ನು, ಜೀವನ ಮೌಲ್ಯವನ್ನು ರಾಮಾಯಣ ಸಾರುವುದರಿಂದ ‘ರಾಮಾಯಣ ಮರುಹುಟ್ಟುಗಳ ಮಹಾಕಾವ್ಯ’ವಾಗಿ ನಮಗೆಲ್ಲ ಕಾಣುತ್ತದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಮಾಯಣಂಗಳ್: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಬಗೆ’ ‘ಸಹಿತ-2’ ಸಾಹಿತ್ಯೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಧಿಕಾರಕ್ಕೇರಲು ರಾಮನ ಹೆಸರನ್ನು ಬಳಸುತ್ತಿರುವ ಸಂದರ್ಭವಿದು. ಮಹಾಕಾವ್ಯಗಳು ರಾಜಕೀಯ ಅಸ್ತ್ರವಾದಾಗ ಅದರ ಅಸ್ಮಿತೆ ನಾಶವಾಗುತ್ತದೆ. ರಾಮಾಯಣ ಅಧ್ಯಯನಶೀಲ ಕಾವ್ಯವಾಗಿ ವಾಸ್ತವತೆ ಮತ್ತು ಕಲ್ಪಿತ ಕಥೆಗಳ ಸಮನ್ವಯವಾಗಿದೆ. ಆತ್ಮಸ್ಥೈರ್ಯದ ಮಹಾಕಾವ್ಯ ರಾಮಾಯಣದಲ್ಲಿ ಹತಾಶೆಯಿಲ್ಲ. ಸಾಂಸ್ಕೃತಿಕ ಘಟಕಗಳನ್ನು, ಸಂಸ್ಕೃತಿಯ ಚಲನಶೀಲತೆ, ಅಧಿಕಾರ-ಭೋಗದ ನಿರಸನದ ಸ್ಥಿತ್ಯಂತರಗಳನ್ನು ಕಾಣಬಹುದು ಎಂದರು.
ಸಮಕಾಲೀನ ಸಂದರ್ಭದಲ್ಲಿರುವ ಪ್ರಸ್ತುತತೆಯಿಂದ ರಾಮಾಯಣದ ಕಥನವನ್ನು ಇಂದಿಗೂ ಚರ್ಚಿಸುತ್ತೇವೆ. ರಾಮಾಯಣ ಮನುಷ್ಯನಲ್ಲಿ ಅಂತರ್ಗತವಾಗಿ ‘ಮನೆ ಮನೆ ರಾಮಾಯಣ’ವಾಗಿದೆ. ಜನಸಮುದಾಯದಿಂದ ಜನಪದ ರಾಮಾಯಣ ಉಗಮವಾಯಿತು. ಸಮಾಜದಿಂದ ಗ್ರಹಿಸಿದ ವಸ್ತುವನ್ನು ಆಧಾರವಾಗಿರಿಸಿಕೊಂಡು ಕವಿಗಳು, ವಿದ್ವಾಂಸರು ರಾಮಾಯಣ ಕಾವ್ಯಗಳನ್ನು, ಕಥನಗಳನ್ನು ರಚಿಸಿದರು. ಹೀಗೆ ರಾಮಾಯಣವು ಕಾಲದಿಂದ ಕಾಲಕ್ಕೆ ಮರುಹುಟ್ಟು ಪಡೆಯುತ್ತಿದೆ ಎಂದು ಹೇಳಿದರು.
ರಾಮಾಯಣಕ್ಕೆ ಸಕಾರಾತ್ಮಕ ನೆಲೆಯಿರುವ ಹಾಗೆ ಅನುಚಿತವಾದ ವ್ಯಾಖ್ಯಾನಗಳೂ ಇವೆ. ಆದ್ದರಿಂದ ನೈಜ ರಾಮಾಯಣವನ್ನು ಹುಡುಕುವ ಪರಿಸ್ಥಿತಿ ಉಂಟಾಗಿದೆ. ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ರಾಮಾಯಣ ಸೃಷ್ಟಿಯಾಗಿದೆ. ಚಾರಿತ್ರಿಕ ಸಂದರ್ಭ ಹಾಗೂ ಸಮಕಾಲೀನ ವಿವೇಕದ ನೆಲೆಯ ಅನುಸಂಧಾನದಲ್ಲಿ ರಾಮಾಯಣ ಕಾವ್ಯವನ್ನು ತಿಳಿಯಬೇಕು ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಹಿತ-2 ಸಾಹಿತ್ಯೋತ್ಸವದ ಸಂಘಟಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿದರು. ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಬಸವರಾಜ ಕೊಡಗಂಟಿ, ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್‌ಕುಮಾರ್ ಸಿ.ಎಸ್. ವಿಷಯ ಮಂಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕ ಡಾ.ಕಿರಣ್ ಹಾಗೂ ಹಿರಿಯ ಪ್ರಾಧ್ಯಾಪಕಿ ಪ್ರೊ. ಅಣ್ಣಮ್ಮ, ಕುಲಸಚಿವೆ ನಾಹಿದಾ ಜಮ್‌ಜಮ್, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ ಇದ್ದರು.