ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಮಾಡುವುದಕ್ಕಿಂತ ಸ್ವಂತ ಉದ್ಯಮವನ್ನು ಆರಂಭಿಸುವುದಕ್ಕೆ ಚಿಂತನೆ ಮಾಡಿ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ.ಝಡ್. ಕುರಿಯನ್ ಕರೆ ನೀಡಿದರು.
ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಸೇತುಬಂಧ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಕೇವಲ ಉದ್ಯೋಗವನ್ನು ಧಕ್ಕಿಸಿಕೊಳ್ಳುವುದಷ್ಟೇ ಅಲ್ಲ, ಆದಷ್ಟು ಬೇಗ ಸ್ವಂತ ಉದ್ಯಮವನ್ನು ಆರಂಭಿಸಬೇಕು. ಆಗ ಮಾತ್ರ ಅವರ ಜೀವನ ಸುಂದರವಾಗಿರುತ್ತದೆ ಎಂದರು.
ಟೈಟಾನ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸಾದ್ ಮಾತನಾಡಿ, ನಾವು ಮಾಡುತ್ತಿರುವ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಬಂದೇ ಬರುತ್ತವೆ. ಇದೆಲ್ಲವನ್ನು ಸರಿಪಡಿಸಿಕೊಂಡು ಮುಂದೆ ಹೋದಾಗ ಮಾತ್ರ ನಾವು ಯಶಸ್ಸನ್ನು ಪಡೆಯುತ್ತೇವೆ ಎಂದು ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ ಮಾತನಾಡಿ, ಮನುಷ್ಯನನ್ನು ಮಾನವರನ್ನಾಗಿ ಮಾಡುವುದಕ್ಕೆ ಶಿಕ್ಷಣ ತುಂಬಾ ಅತ್ಯಗತ್ಯವಾಗಿದೆ. ಇಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣದಿಂದ ಉದ್ಯೋಗ ದೊರೆಯುತ್ತದೆ. ಆದರೆ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಹೃದಯವಂತಿಕೆಯ ಶಿಕ್ಷಣ. ಇದು ಕೇವಲ ಸಾಹಿತ್ಯದ ಅಧ್ಯಯನದಿಂದ ಮಾತ್ರ ಗಳಿಸಲು ಸಾಧ್ಯ. ಸಾಹಿತ್ಯದ ಶಿಕ್ಷಣವನ್ನು ಪಡೆಯದೇ ಹೋದರೆ ನಾವು ಮನುಷ್ಯರಾಗಿ ಜನಿಸಿದ್ದೇ ವ್ಯರ್ಥ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್ ರವಿಪ್ರಕಾಶ್ ಮಾತನಾಡಿ, ಸೇತುಬಂಧ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಂಬAಧವನ್ನು ವೃದ್ಧಿಸುವುದಾಗಿದೆ. ಕಾಲೇಜಿನಲ್ಲಿ ಅತೀ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಯಿಂದ ಹಲವು ಶೈಕ್ಷಣಿಕ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ವಿವಿಧ ವಿಭಾಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಲೇಜಿನ ವತಿಯಿಂದ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಎಸ್‌ಐಟಿ ಕಾಲೇಜಿನ ವಿಶ್ರಾಂತ ಆಡಳಿತಾಧಿಕಾರಿ ಡಾ. ವೈ.ಎಂ.ರೆಡ್ಡಿ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ವೀರಯ್ಯ, ಅಕಾಡೆಮಿ ಡೀನ್ ಡಾ. ರೇಣುಕಲತಾ, ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ. ವಿ ರವಿರಾಮ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಜೀವಿತ, ಜಿ.ಎಲ್.ಸ್ವರ್ಣಲತಾ ಇದ್ದರು.