ಭಾಗವತರು ಸಾಂಸ್ಕೃತಿಕ ಸಂಘಟನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಡಿ.8ರಂದು ಪ್ರೊ.ಎಸ್.ಜಿ.ಎಸ್-78 ಹಿನ್ನೆಲೆಯಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬದುಕು-ಬರಹ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ, ಗಾಯನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆ ದಿನ ಬೆಳಗ್ಗೆ 10 ರಿಂದ ಸಂಜೆ 7ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಲವು ಗೋಷ್ಠಿಗಳು ನಡೆಯಲಿವೆ. ಬೆಳಗ್ಗೆ 10 ಕ್ಕೆ ಪ್ರೊ.ಎಸ್.ಜಿ.ಎಸ್ ಅವರ ಕಾವ್ಯ ಗಾಯನ ಇದೆ. ಬೆ,11ಗಂಟೆಗೆ ಉದ್ಘಾಟನೆ ಕಾರ್ಯಕ್ರಮವಿದ್ದು, ಹಿರಿಯ ಸಂಗೀತ ನಿರ್ದೇಶಕ ಡಾ.ಹಂಸಲೇಖ ಉದ್ಘಾಟನೆ ನೆರವೇರಿಸುವರು. ಲೇಖಕ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸುವರು. ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡುವರು.
ಮಧ್ಯಾಹ್ನ 12.30ಕ್ಕೆ ಮೊದಲ ಗೋಷ್ಠಿ ನಡೆಯಲಿದ್ದು, ಪ್ರೊ.ಎಸ್.ಜಿ.ಎಸ್ ಬರಹ-ಬದುಕು, ಕಾವ್ಯ ಕುರಿತು ಡಾ.ಎಂ.ಎಸ್.ಆಶಾದೇವಿ ಮತ್ತು ಗದ್ಯ ಕುರಿತು ಡಾ.ಎಚ್.ದಂಡಪ್ಪ ಮಾತನಾಡುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2.45ಕ್ಕೆ 2ನೇ ಗೋಷ್ಠಿ ನಡೆಯಲಿದ್ದು, ಪ್ರೊ.ಎಸ್.ಜಿ.ಎಸ್ ಅವರ ವಿಚಾರ ಮತ್ತು ಆಡಳಿತ ವಿಷಯ ಕುರಿತು ಲಕ್ಷ್ಮಣ ಕೊಡಸೆ ಮಾತನಾಡುವರು. ನಾಟಕ ಕುರಿತು ಡಾ.ಬಂಜಗೆರೆ ಜಯಪ್ರಕಾಶ್, ವಚನ ಕುರಿತು ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಲಿದ್ದು, ಕರ್ನಾಕಟ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು.
ಸಂಜೆ.4.30ಕ್ಕೆ ಪ್ರೊ.ಎಸ್.ಜಿ.ಎಸ್ ಅವರೊಂದಿಗೆ ಸಂವಾದ ನಡೆಯಲಿದ್ದು, ಲೇಖಕ ಹಾಗೂ ಚಿಂತಕ ಜಿ.ಎನ್.ಮೋಹನ್ ಸಂವಾದ ನಡೆಸಿಕೊಡುವರು. ಶ್ರೀಮತಿ, ರುದ್ರಪ್ಪ ಹನಗವಾಡಿ, ಪಿ.ಚಂದ್ರಿಕಾ, ಮಹಿಪಾಲರೆಡ್ಡಿ ಮುನ್ನೂರ್, ಬಾಲಗುರುಮೂರ್ತಿ, ವಡ್ಡಗೆರೆ ನಾಗರಾಜಯ್ಯ, ಪ್ರೊ.ಜೆ.ಪಿ. ಶಿವರಾಜ್, ಎಚ್.ಆರ್.ಸುಜಾತ, ಡಾ.ಹುಲಿಕುಂಟೆ ಮೂರ್ತಿ, ಸುಮಾ ಪ್ರಕಾಶ್ ಸಂವಾದದಲ್ಲಿ ಭಾಗವಹಿಸುವರು.
ಅಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆ ವಹಿಸುವರು. ಪ್ರೊ.ಎಸ್.ಜಿ.ಎಸ್ ದಂಪತಿಗೆ ಡಾ.ಕೆ.ಮರುಳಸಿದ್ದಪ್ಪ ರಂಗಗೌರವ ನಡೆಸಿಕೊಡುವರು. ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ ಭಾಗವಹಿಸುವರು.