ಮೊಬೈಲ್ ಕೇವಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ವಸ್ತುವಾಗ ಬೇಕೇ ಹೊರತು, ಮಾರಕ ವಸ್ತುವಾಗಬಾರದು. ವಿದ್ಯಾರ್ಥಿಗಳು ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಪುಸ್ತಕ ಹಿಡಿದು ಓದಬೇಕು. ಯಾವುದಾದರೂ ಸರಿಯೇ ಒಳ್ಳೆಯದನ್ನು ಕಲಿಯಬೇಕು ಎಂದು ರಂಗಭೂಮಿ ಕಲಾವಿದ ಡಾ. ಲಕ್ಷ್ಮಣ ದಾಸ್ ಹೇಳಿದರು.
ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ನೇ ವಾರ್ಷಿಕೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೀವೆಲ್ಲರೂ ತಾಯಿಗೆ ಹೆಚ್ಚು ಗೌರವ ಕೊಡಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬಹಳ ಎತ್ತರಕ್ಕೆ ಬೆಳೆಯಬೇಕು. ಬಸವಣ್ಣನವರ ವಚನಗಳನ್ನು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಕಲಿಯಬೇಕು ಎಂದರು.
ತಿಪಟೂರಿನ ನಗರಸಭೆಯ ಅಧ್ಯಕ್ಷ ಯಮುನಾ ಧರಣೇಶ್ ಮಾತನಾಡಿ, ಜ್ಞಾನವನ್ನು ಬಯಸುವವನೇ ನಿಜವಾದ ವಿದ್ಯಾರ್ಥಿ. ವಿದ್ಯಾರ್ಥಿಯು ತನ್ನ ಜ್ಞಾನ ಹೆಚ್ಚಿಸುವ ವಿಷಯದ ಕಡೆ ಗಮನಹರಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಐದು ಗುಣಗಳಿರಬೇಕು. ಪರಿಶ್ರಮ, ಫೋಕಸ್, ಅಲರ್ಟ್ನೆಸ್, ಈಟ್ಲೆಸ್ ಮತ್ತು ಗೃಹತ್ಯಾಗಿ ಎಂಬ ಐದು ಗುಣಗಳು ಒಬ್ಬ ವ್ಯಕ್ತಿಯನ್ನು ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಹೆಚ್. ಬಿ.ಕುಮಾರಸ್ವಾಮಿ ಮಾತನಾಡಿ, ತಂದೆ ತಾಯಿಯಂದಿರು ಬಹಳ ನಂಬಿಕೆ ಇಟ್ಟು ಇಲ್ಲಿಗೆ ಓದಲು ಕಳುಹಿಸಿರುತ್ತಾರೆ. ವಿದ್ಯಾರ್ಥಿಗಳಾದವರು ಉತ್ತಮ ರೀತಿಯಲ್ಲಿ ಓದಿ ತಂದೆ ತಾಯಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದು ಕೊಡಬೇಕು ಎಂದು ಹೇಳಿದರು.
ಡಾ. ಶಿವಕುಮಾರ್ಸಿ ಮಾತನಾಡಿ,ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಥವಾ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಪಡೆಯಲು ಉತ್ತೇಜನ ನೀಡುತ್ತಾ ಬಂದಿದೆ ಎಂದರು.
ತುಮಕೂರಿನ ಸಿದ್ದಗಂಗಾ ಮಠದ ಉಪನ್ಯಾಸಕ ಬಾಲಚಂದ್ರ, ದೈಹಿಕ ಶಿಕ್ಷಕ ಶ್ರೀನಿವಾಸ್ , ನಗರಸಭಾ ಸದಸ್ಯ ಯೋಗೀಶ್, ಮಾತನಾಡಿದರು. ಕಾರ್ಯಕ್ರಮದಲ್ಲಿ ಗಾಯಕ ದಿಬ್ಬೂರು ಮಂಜುನಾಥ್, ಕಾಲೇಜಿನ ಪೋಷಕರ ಸಂಘದ ಅಧ್ಯಕ್ಷ ಬಿಲ್ಲೆಮನೆ ಚಂದ್ರಶೇಖರ್, ಸಿ.ಡಿ.ಸಿ. ಸದಸ್ಯ ಝರಾ ಜಬೀನ್, ಉಪನ್ಯಾಸಕ ಡಾ.ಸ್ಮಿತಾ, ಡಾ,ಚಿಕ್ಕಹೆಗಡೆ, ಡಾ,ಸುಭದ್ರಮ್ಮ,ಪತ್ರಿಕೋದ್ಯಮ ವಿಭಾಗದ ಶಂಕರಪ್ಪ ಹಾರೋಗೆರೆ, ನಾಗರಾಜು, ಸುರೇಶ್ ಇತರರು ಇದ್ದರು.