ತುಮಕೂರಿನ ಗಾಜಿನಮನೆಯಲ್ಲಿ ನಡೆದ 16ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮತ್ತು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು ಇದಕ್ಕೆ ಜಿಲ್ಲಾಧಿಕಾರಿ ಮತ್ತು ಸಾಹಿತಿಗಳು ಮತ್ತು ಸಮ್ಮೇಳನಕ್ಕೆ ಆಗಮಿಸಿದ್ದವರು ಸಾಕ್ಷಿಯಾದರು.
ಶನಿವಾರ ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ ಆರಂಭವಾಯಿತು. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಕವಿಗಳೆಲ್ಲರೂ ಒಂದೊಂದು ಕವನ ವಾಚನ ಮಾಡಿದರು. ಎಲ್ಲರೂ ಕವನ ವಾಚನ ಮಾಡಿದ ಮೇಲೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅವರು ಅಧ್ಯಕ್ಷೀಯ ಭಾಷಣ ಮಾಡಬೇಕಿತ್ತು. ಆ ಹೊತ್ತಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಡಿಸಿ ಶುಭಕಲ್ಯಾಣ್ ಜೊತೆಯಲ್ಲಿ ವೇದಿಕೆಯ ಬಳಿ ಬಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಬಂದ ಕಸಾಪ ಸಿದ್ದಲಿಂಗಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಿಳಿಗೆರೆ ಕೃಷ್ಣಮೂರ್ತಿ ಅವರ ಬಳಿ ಬಂದು ಮೂರು ನಿಮಿಷ ಮಾತ್ರ ಮಾತನಾಡುವಂತೆ ಹೇಳಿದರು. ಇದರಿಂದ ಕುಪಿತಗೊಂಡ ಬಿಳಿಗೆರೆ ಕೃಷ್ಣಮೂರ್ತಿ ರಾಜಕಾರಣಿಗಳಿಗೆ ಗಂಟೆಗಟ್ಟಲೆ ಮಾತನಾಡಲು ಅವಕಾಶ ನೀಡುತ್ತೀರ. ನಮಗೆ ಯಾಕೆ ಮೂರು ನಿಮಿಷ ಮಾತನಾಡಿ ಎಂದು ಹೇಳುತ್ತೀರ ಎಂದು ಅಸಮಾಧಾನ ಹೊರ ಹಾಕಿದರು.
ಅಷ್ಟೇ ಅಲ್ಲ ಬಿಳಿಗೆರೆ ಕೃಷ್ಣಮೂರ್ತಿ ನೀವು ಮೂರು ನಿಮಿಷ ಮಾತನಾಡಿದ ಎಂದ ಮೇಲೆ ನಾನು ಮಾತನಾಡುವುದಿಲ್ಲ. ಇಲ್ಲಿಂದ ಹೋಗುತ್ತೇನೆ ಎಂದು ವೇದಿಕೆಯಿಂದ ಕೆಳಗೆ ಇಳಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮತ್ತು ಬಿಳಿಗೆರೆ ಕೃಷ್ಣಮೂರ್ತಿ ನಡುವ ವಾಗ್ವಾದ ನಡೆಯಿತು. ಆಗ ಬಿಳಿಗೆರೆ ಕೃಷ್ಣಮೂರ್ತಿ ಅವರನ್ನು ಅಲ್ಲಿದ್ದ ಕೆಲವರು ಸಮಾಧಾನಪಡಿಸಿದರು. ಇದಕ್ಕೆ ಒಪ್ಪದ ಬಿಳಿಗೆರೆ ನಾನು ಮಾತನಾಡುವುದಿಲ್ಲ ಎಂದು ಪಟ್ಟು ಹಿಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಯಾವ ಕಾರಣಕ್ಕಾಗಿ ಹೀಗೆ ಹೇಳಿದರು ಎಂಬುದೇ ಯಾರಿಗೂ ಅರ್ಥವಾಗಲಿಲ್ಲ.
ಇಬ್ಬರ ನಡುವೆ ನಡೆದ ವಾಗ್ವಾದದಿಂದಾಗಿ ಸಮ್ಮೇಳನದ ವೇದಿಕೆಯ ಮುಂಬಾಗದಲ್ಲಿ ಕುಳಿತಿದ್ದ ಸಭಿಕರು ಮತ್ತು ವೇದಿಕೆಯ ಮೇಲಿದ್ದ ಸಾಹಿತಿಗಳು ಮಾತಿನ ಚಕಮಕಿಗೆ ಸಾಕ್ಷಿಯಾದರು.