ಸ್ವ ಘೋಷಿತ ರಾಷ್ಟ್ರೀಯ ಭಾಷೆ ಎಂದು ಹೇಳಲಾಗುವ ಹಿಂದಿ ಎಂಬ ಘಟ ಸರ್ಪವು ಕನ್ನಡವನ್ನು ನುಂಗಲು ಬಿಡಬಾರದು ಎಂದು 16ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.
ತುಮಕೂರಿನಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದಲ್ಲಿ 11 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಪಡೆದರೂ ಸಹ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಬಿಂಬಿಸಲಾಗುತ್ತಿದೆ. ಎಲ್ಲರಿಗೂ ಅವರವರ ಮಾತೃ ಭಾಷೆ ಮಹತ್ವವಾದುದು. ನಮ್ಮ ಭಾಷೆಯನ್ನು ನಾವು ಪ್ರೀತಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದು ತಿಳಿಸಿದರು.
ಬಹು ಭಾಷಿಕ, ಬಹು ಸಂಸ್ಕೃತಿ, ಬಹು ಸಂಪ್ರದಾಯಗಳನ್ನು ಹೊಂದಿರುವ ದೇಶದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಾಡು-ನುಡಿಗಾಗಿ ಹೋರಾಡಿದ ಹೋರಾಟಗಾರರ ಶ್ರಮವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಲೇಖಕರು, ಸಾಹಿತಿಗಳು, ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸಲೂ ಸಹ ತೊಡಕುಗಳು ಉಂಟಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಭಾಷೆಯಲ್ಲಿ ಇತರೆ ಭಾಷೆಗಳಿಗಿಂತ ಹೆಚ್ಚು ವೈಚಾರಿಕತೆ ಮತ್ತು ವೈಜ್ಞಾನಿಕತೆ ಬಗ್ಗೆ ಸಾಹಿತ್ಯಗಳು ರಚನೆಯಾಗಿರುವುದೇ ಕನ್ನಡ ಭಾಷೆಯ ಸರ್ವಾಂಗೀಣ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆ, ದಲಿತ, ರೈತ, ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯ ಕೇಂದ್ರಿತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳನ್ನು ಚರ್ಚಿಸುವ ಮೂಲಕ ಕನ್ನಡದ ವಿವೇಕವನ್ನು ವಿಸ್ತರಿಸುವ ಕೆಲಸವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತ ಅಶ್ವಿಜ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಗೌರವ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಡಾ. ಕಂಟಲಗೆರೆ ಸಣ್ಣಹೊನ್ನಯ್ಯ, ಮುರುಳಿಕೃಷ್ಣಪ್ಪ ಇದ್ದರು