ಮಧ್ಯಾಹ್ನದ ಬಿಸಿಯೂಟದ ವೇಳೆ ಹುಳು ಬಿದ್ದ ಚಿಕ್ಕಿ ತಿಂದು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೋಣನಕುರಿಕೆ ಗ್ರಾಮದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಬಿಸಿ ಊಟದ ಜೊತೆಗೆ ಹುಳು ಬಿದ್ದಿದ್ದ ಚಿಕ್ಕೆ ತಿಂದು ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿದೆ ಎನ್ನಲಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಕ್ಕಳನ್ನು ಪಟ್ಟಣದ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಸರ್ಕಾರಿ ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ತಮ್ಮ ಮಕ್ಕಳ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವುದನ್ನು ತಿಳಿದ ಪೋಷಕರು ಆಸ್ಪತ್ರೆ ಬಳಿ ಬಂದು ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದು, ಯಾವುದೇ ತೊಂದರೆಯಿಲ್ಲ ಎಂಬುದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.
ಹೊಂದಾಣಿಕೆ ಕೊರತೆ ಆರೋಪ:
ಕೋಣನಕುರಿಕೆ ಗ್ರಾಮದಲ್ಲಿರುವ ಶಾಲೆಯಲ್ಲಿ ಶಿಕ್ಷಕರು ಮತ್ತು ಅಡುಗೆಯವರ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಪ್ರತಿದಿನ ಅಡುಗೆಯವರೊಂದಿಗೆ ಶಿಕ್ಷಕರು ಜಗಳ ತೆಗೆಯುತ್ತಿದ್ದರು ಎಂದು ಹೇಳಲಾಗಿದೆ. ಅಡುಗೆಯವರನ್ನು ಕೆಲಸದಿಂದ ಬಿಡಿಸಲು ಶಿಕ್ಷಕರು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.