ಕೊರೊನ ಕಿಟ್ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಾಗಿದೆ. ಯಡಿಯೂರಪ್ಪನವರ ಬದಲಾವಣೆಗೆ ಬಿಜೆಪಿ ಸೂಕ್ತ ಕಾರಣಗಳನ್ನು ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು ಎನ್ನುವಾಗಲೇ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಬದಲಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಯಿಂದ ಇಳಿಯುತ್ತಿದ್ದಂತೆ ಗಳಗಳನೆ ಕಣ್ಣೀರು ಸುರಿಸಿದರು. ಯಡಿಯೂರಪ್ಪ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದೇ ಆದರೆ ಅವರನ್ನು ಕೆಳಗೆ ಇಳಿಸುವ ಅಗತ್ಯ ಇರಲಿಲ್ಲ. ಹಾಗಿದ್ದರೆ ಅವರು ಅಸಮರ್ಥರಾಗಿದ್ದರೇ ಅಥವಾ ಭ್ರಷ್ಟಾಚಾರದ ಆರೋಪ ಅವರ ಮೇಲಿತ್ತೇ? ಬದಲಾವಣೆಗೆ ಬಿಜೆಪಿ ಕಾರಣಗಳನ್ನೇ ತಿಳಿಸಲಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.
ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ-ಆಶಾ ಕಾರ್ಯಕರ್ತರಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಒಳ್ಳೆಯವರೇ ಆಗಿದ್ದರೆ ಬದಲಾವಣೆ ಯಾಕೆ ಮಾಡಬೇಕಿತ್ತು. ಇದು ಸರ್ಕಾರದ ವೈಪಲ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿರುವುದು ನೀವು ಜನರಿಗೆ ಉತ್ತಮ ಆಡಳಿತ ಕೊಡಲು ಆಗಿಲ್ಲ ಎಂಬುದು ತೋರಿಸುತ್ತದೆ. ಬಿಜೆಪಿ ತಪ್ಪನ್ನು ಒಪ್ಪಿಕೊಂಡಿದೆ. ಕೇಂದ್ರದಲ್ಲಿ ಆರೋಗ್ಯ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಿಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಜನರು ಕೇಳಿದರು. ಚಪ್ಪಾಳೆ ತಟ್ಟಿದರು. ಜಾಗಟೆ ಬಾರಿಸಿದರು. ದೀಪ ಬೆಳಗಿಸಿದರು. 21 ದಿನಕ್ಕೆ ಕೊರೊನ ಓಡಿಸುತ್ತೇವೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಕೊರೊನ ಸೋಂಕು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದರು.
ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದು, ಯಾವ ಪುರುಷಾರ್ಥಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಸರ್ಕಾರ ಬಿಡುತ್ತಿಲ್ಲ. ಹಿಂದುಳಿದ ವರ್ಗದ ನಾಯಕ ದೇವರಾಜ ಅರಸು ಕಾರ್ಯಕ್ರಮ ಮಾಡುತ್ತೇವೆ. ಅವಕಾಶ ಕೊಡಿ ಎಂದು ಕೇಳಿದರೆ ಅದಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.