ಅಮೆರಿಕಾ ಪಡೆಗಳು ಆಫ್ಘಾನಿಸ್ತಾನವನ್ನು ತೊರೆದಿರುವ ಹಿನ್ನೆಲೆಯಲ್ಲಿ ಆಗಸ್ಟ್ 19ರಂದು ತಾಲಿಬಾನ್ ಉಗ್ರರು ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ ಎಂದು ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ. ರಸ್ತೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದ ತಾಲಿಬಾನ್ ಉಗ್ರರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಜೊತೆಗೆ ಬ್ರಿಟಿಷರ ಆಳ್ವಿಕೆಯಿಂದ ಆಫ್ಘಾನಿಸ್ತಾನ ಬಿಡುಗಡೆ ಹೊಂದಿದ ದಿನವನ್ನೂ ತಾಲಿಬಾನಿಗಳು ಆಚರಿಸಿದರು. ಅಲ್ಲದೆ ಅಮೆರಿಕಾ ಮತ್ತು ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡಿದ ಕುಟುಂಬಗಳನ್ನು ಹುಡುಕಿ ಕೊಲ್ಲತೊಡಗಿದ್ದಾರೆ. ಅಮೆರಿಕಾಕ್ಕೆ ಬೆಂಬಲ ನೀಡಿದವರನ್ನು ತಾಲಿಬಾನಿಗಳು ಕಂಡಕಂಡಲ್ಲಿ ಹತ್ಯೆ ಮಾಡುತ್ತಿದ್ದಾರೆ.
ತಾಲಿಬಾನಿ ಉಗ್ರರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆ. ತಾಲಿಬಾನ್ ವಿರೋಧಿ ಜನರನ್ನು ಹಿಂಸಿಸುವ ಮತ್ತು ಅವರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ನ್ಯೂಯಾರ್ಕ್ ಟೈಮ್ ತಿಳಿಸಿದೆ.
ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿರುವ ತಾಲಿಬಾನ್ ಉಗ್ರರು ಸರ್ಕಾರಿ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅನುಮಾನಾಸ್ಪದವಾಗಿ ಕಂಡವರನ್ನು ಹಿಡಿದು ಹಿಂಸೆ ನೀಡುವ ಜೊತೆಗೆ ಜೈಲಿಗೆ ತಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವವೆ.
ಆಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಇದೀಗ ಜೀವಭಯ ಕಾಡುತ್ತಿದೆ. ರಸ್ತೆಗಳಲ್ಲಿ ಓಡಾಡಲು ಹೆದರುತ್ತಿದ್ದಾರೆ. ಕಸ್ಟಮ್ ಸುಂಕ ಯಾರಿಗೆ ಕೊಡಬೇಕೆಂಬ ಬಗ್ಗೆ ಗೊಂದಲದಲ್ಲಿ ಮುಳುಗಿದ್ದಾರೆ.
ಈ ಮಧ್ಯೆ ಭಾರತ ಮತ್ತು ಆಫ್ಘಾನಿಸ್ತಾನದ ನಡುವೆ ಪಾಕಿಸ್ತಾನದ ಮೂಲಕ ನಡೆಯುತ್ತಿದ್ದ ಆಮದು-ರಫ್ತು ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.
ತಾಲಿಬಾನ್ ಈಗ ಆಫ್ಘಾನಿಸ್ತಾನದ ಆಡಳಿತದ ಕಡೆ ಗಮನ ಹರಿಸಿದೆ.