ರಾಜ್ಯದ ವಿಧಾನ ಮಂಡಲ ಅಧಿವೇಶನವನ್ನು ಸೆಪ್ಟೆಂಬರ್ 13 ರಿಂದ 24ರವರೆಗೆ ನಡೆಸಲು ಆಗಸ್ಟ್ 19ರಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಹಲವು ವಿಷಯಗಳು ಚರ್ಚೆಗೆ ಬರಲಿವೆ.
174 ನಿಯಮಾವಳಿಯಂತೆ ಪ್ರತಿ ಆರು ತಿಂಗಳಿಗೊಮ್ಮೆ ಅಧಿವೇಶನ ನಡೆಯಬೇಕು. ಅದರಂತೆ ಈ ಬಾರಿಯ ಮುಂಗಾರು ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ.
ಕಳೆದ ಎರಡು ಬಾರಿಯೂ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನವನ್ನು ನಡೆಸಿಲ್ಲ. ಇದರಿಂದ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದಂತಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸುವರ್ಣ ಸೌಧ ನಿರ್ಮಿಸಿ ಅಲ್ಲಿ ಅಧಿವೇಶನವನ್ನು ನಡೆಸದೇ ಇರುವುದು ಆ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸುವರ್ಣಸೌಧದಲ್ಲಯ ಅಧಿವೇಶನ ನಡೆದಿದ್ದರೆ ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದಿತ್ತು. ಸ್ಥಳೀಯರು ತಮ್ಮ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಮನೆ, ಹೊಲ, ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ನಷ್ಟಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರಾಜಾ ಸಾಬ್ ಒತ್ತಾಯಿಸಿದ್ದಾರೆ.
ಈ ಬಾರಿ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಇದು ಉತ್ತರ ಕರ್ನಾಟವನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದ್ದಾರೆ.