ತುಮಕೂರಿನಲ್ಲಿ ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ/ಬಂಡಾಯ ಸಾಹಿತ್ಯ ಗೋಷ್ಠಿ ಇಲ್ಲದಿರುವಂತೆ ನೋಡಿಕೊಂಡಿರುವ ಕಸಾಪ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಕ್ರಮಕ್ಕೆ ಕವಿಗಳು, ಸಾಹಿತಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾದ ಅಗ್ರಹಾರ ಕೃಷ್ಣಮೂರ್ತಿ ದಲಿತರೊಂದಿಗೆ ಸಂಪರ್ಕ ಹೊಂದಿರುವ ಮುಖ್ಯ ಸಾಹಿತಿಗಳಲ್ಲಿ ಒಬ್ಬರು. ಆದರೆ ಅವರೇ ಅಧ್ಯಕ್ಷರಾಗಿರುವ ಸಮ್ಮೇಳನದಲ್ಲಿ ದಲಿತ ಗೋಷ್ಠಿಗಳು ಇಲ್ಲದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ದಿ ನ್ಯೂಸ್ ಕಿಟ್ ನೊಂದಿಗೆ ಮಾತನಾಡಿದ ದಲಿತ ಮುಖಂಡ ಮುರುಳಿ ಕುಂದೂರು, ದಲಿತ ಹಿನ್ನೆಲೆಯಿಂದ ಬಂದಿರುವ ಅಗ್ರಹಾರ ಕೃಷ್ಣಮೂರ್ತಿ ಅವರೇ ಅಧ್ಯಕ್ಷರಾಗಿರುವ ಜಿಲ್ಲಾ ಸಮ್ಮೇಳನದಲ್ಲಿ ದಲಿತ ಗೋಷ್ಠಿಗಳಿಗೆ ಅವಕಾಶ ನೀಡಿಲ್ಲ. ತುಮಕೂರು ಜಿಲ್ಲೆ ದಲಿತ ಚಳವಳಿಗೆ ಹೆಸರು ಪಡೆದಿದೆ. ಆದರೂ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಚಳವಳಿಯ ಗೋಷ್ಠಿಗಳು ಇಲ್ಲದಿರುವುದನ್ನು ಖಂಡಿಸುತ್ತೇವೆ ಎಂದರು.

ದಲಿತ ಲೇಖಕ ಕಾಂತರಾಜು ಗುಪ್ಟ್ನ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, 16ನೆಯ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ದಲಿತ/ಬಂಡಾಯ ಸಾಹಿತ್ಯ ಗೋಷ್ಠಿ ಇಲ್ಲದಿರುವುದು ಖಂಡನೀಯ ಎಂದಿದ್ದಾರೆ.
ಬರಗೂರು ರಾಮಚಂದ್ರಪ್ಪ, ಕೇಬಿ ಸಿದ್ದಯ್ಯ, ತುಂಬಾಡಿ ರಾಮಣ್ಣ ಮುಂತಾದ ದಲಿತ-ಬಂಡಾಯ ಸಾಹಿತಿಗಳಿಂದ ರಾಜ್ಯದ ಗಮನ ಸೆಳೆದಿರುವ ತುಮಕೂರು ಮಣ್ಣಿನಲ್ಲಿಯೇ ಈ ಕುರಿತ ಗೋಷ್ಠಿ ಇಲ್ಲದಿರುವುದು ಖಂಡನೀಯ. ಈ ಬಗ್ಗೆ ಮೂರ್ತಿ ತಿಮ್ಮನಹಳ್ಳಿ ಅವರು ಆಕ್ಷೇಪಣೆ ಎತ್ತಿದರು. ಇದಕ್ಕೆ ನನ್ನ ಸಹಮತವೂ ಇದೆ ಎಂದು ಹೇಳಿದ್ದಾರೆ.
ಪರಿಷತ್ತಿನ ಈ ನಡೆಯನ್ನು ವಿರೋಧಿಸಿ ಪ್ರತಿಭಟನೆ ದಾಖಲಿಸಬೇಕಾಗಿದೆ. ಈ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವುದು ದಸಂಸದೊಂದಿಗೆ ಗುರುತಿಸಿಕೊಂಡಿರುವ ಅಗ್ರಹಾರ ಕೃಷ್ಣಮೂರ್ತಿಯವರು. ಜೊತೆಗೆ ಕೊರಟಗೆರೆ ಭಾಗದ ಸಂಗಾತಿಗಳಿಗೆ ನಮ್ಮ ತಾಲ್ಲೂಕಿನವರು ಎಂಬ ಅಭಿಮಾನವಾದರೆ, ದಲಿತ ಚಳುವಳಿಯ ಒಡನಾಡಿಗಳಿಗೆ ತಮ್ಮ ನಡುವಿನ ಸಾಕ್ಷಿಪ್ರಜ್ಞೆ ಎಂಬ ಒಲುಮೆ ಇದೆ.
ಈಗ ನನ್ನ ಕಾಡುತ್ತಿರುವುದು ಸಮೃದ್ಧವಾಗಿರುವ ದಲಿತ ಸಾಹಿತ್ಯ ಗೋಷ್ಠಿಯ ಗೈರನ್ನು ಪ್ರತಿಭಟಿಸಿ ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದೋ? ನಮ್ಮಡೊಗಿದ್ದು ಪ್ರೀತಿ ಹಂಚುವ ಅಗ್ರಹಾರರವರು ಅಧ್ಯಕ್ಷರಾಗಿದ್ದಾಗಲೇ ಪ್ರತಿಭಟಿಸಬೇಕಲ್ಲ? ಎಂದು ಹೇಳಿದ್ದಾರೆ.


