ಜಾತಿ ವ್ಯವಸ್ಥೆ ಇಂದಿಗೂ ನಮ್ಮನ್ನು ಕಾಡುತ್ತಿದ್ದು, ನಮ್ಮ ಜಾತಿಯವರಾದರೆ ಮಾತ್ರ ಮಾತಿಗೆ ಇಳಿಯುತ್ತೇವೆ. ಇಲ್ಲದಿದ್ದರೆ ಹೊರಟು ಹೋಗುವಂತಹ ಪರಿಸ್ತಿತಿ ನಿರ್ಮಾಣವಾಗಿದೆ. ಇಂತಹ ಅಸಹಿಷ್ಣುತೆ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಆತಂಕ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಕನ್ನಡ ಜನಮನ ವೇದಿಕೆ, ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ನಮ್ಮನ್ನು ನಾವು ಗೌರವಿಸಿಕೊಳ್ಳೋಣ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೇಣೀಕೃತ ವ್ಯವಸ್ಥೆಯಲ್ಲಿ ನಮ್ಮವರು ಎಂದರೆ ನಮ್ಮ ಜಾತಿಯವರು ಮಾತ್ರ ಇರಬೇಕು ಎಂಬ ಪರಿಸ್ಥಿತಿ ಇದೆ. ಕೂತಾಗ, ನಿಂತಾಗ, ಮಾತನಾಡುವಾಗ ಎದುರುಗಡೆ ಇರುವ ವ್ಯಕ್ತಿಯ ಜಾತಿ ಹುಡುಕುತ್ತೇವೆ. ನಮ್ಮ ಜಾತಿಯವರಾದರೆ ಮಾತ್ರ ಮಾತಿಗೆ ಇಳಿಯುತ್ತೇವೆ. ಇಲ್ಲದಿದ್ದರೆ ಹೊರಟು ಹೋಗುತ್ತೇವೆ ಎಂದು ಹೇಳಿದರು.
ಜಾತಿ, ಧರ್ಮ ಮೀರಿ ಇಡೀ ವ್ಯವಸ್ಥೆಯನ್ನು ಮಾನವೀಕರಣ ಮಾಡಲು ಪ್ರಯತ್ನಿಸುತ್ತಿರುವ ಮನಸುಗಳನ್ನು ಗುರುತಿಸಬೇಕು. ಲೇಖಕರು, ಸಾಹಿತಿಗಳು ಪ್ರೀತಿ ಹಂಚುತ್ತಾ, ಸಮಾಜದ ಪರಿವರ್ತನೆಗೆ ಶ್ರಮಿಸುತ್ತಿದ್ದಾರೆ. ನಮ್ಮ ಸುತ್ತ ಕ್ರೌರ್ಯ ಇದ್ದರೂ ಪ್ರೀತಿ ಬಿತ್ತಿ, ಸಮಾನತೆ ಕಾಣುತ್ತಾರೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಅಸ್ತಿತ್ವ ಕೊಟ್ಟರು. ಅವಮಾನ ಸಹಿಸಿ ಬದುಕಿ ತೋರಿಸಿದರು. ತಮಗಾದ ಅವಮಾನ ಇತರರಿಗೆ ಆಗಬಾರದು ಎಂದು ಹೋರಾಟ ಮಾಡಿ ಸಂವಿಧಾನ ಬರೆದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ, ಇಲ್ಲಿ ಸನ್ಮಾನಿತರಾದವರು ಸಮ ಸಮಾಜ ಹೊಂದಬೇಕೆಂಬ ತುಡಿತವುಳ್ಳವರು, ಪ್ರಶಸ್ತಿಗಳು ಮನುಷ್ಯ ಮನುಷ್ಯನನ್ನಾಗಿ ರೂಪಿಸಿದೆ ಎಂದರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವಡ್ಡಗೆರೆ ಕದರಮ್ಮ, ವಿರೂಪಾಕ್ಷ ಡ್ಯಾಗೇರಹಳ್ಳಿ, ತುಂಬಾಡಿ ರಾಮಣ್ಣ, ಎಸ್.ವಿಷ್ಣುಕುಮಾರ್. ಪ್ರಭು ಹರಸೂರು, ಎಲ್.ಮುಕುಂದ, ಎಂ.ಸಿ.ನರಸಿಂಹಮೂರ್ತಿ, ವಾಣಿ ಸತೀಶ್, ಸಿದ್ದಗಂಗಯ್ಯ ಹೊಲತಾಳು, ಎಚ್.ವಿ.ವೆಂಕಟಾಚಲ, ಸಣ್ಣರಂಗಮ್ಮ ಪಾವಗಡ, ಕೆ.ಎಂ.ರವೀಶ್, ಯಶವಂತ್ ಕಲ್ಮನೆ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಎಂಜಿನಿಯರ್ ಶಿವಕುಮಾರ್, ಪತ್ರಕರ್ತ ನಾಗಣ್ಯ ಹಾಜರಿದ್ದರು. ಲಕ್ಷ್ಮಿರಂಗಯ್ಯ ನಿರೂಪಿಸಿ, ಕುಂದೂರು ಮುರುಳಿ ಸ್ವಾಗತಿಸಿ, ಶಿವಣ್ಣ ತಿಮ್ಲಾಪುರ ಪ್ರಾಸ್ತಾವಿಕ ಮಾತನಾಡಿದರು.


