ವಿದ್ಯೆ ಹೆಣ್ಣಿಗೆ ಗೌರವ, ಸಮಾನತೆ ಮತ್ತು ಉನ್ನತ ಸ್ಥಾನವನ್ನು ರೂಪಿಸಿಕೊಡುವ ಆಯುಧವಾಗಿ ಎಂದು ಕವಯತ್ರಿ ಮಲ್ಲಿಕಾ ಬಸವರಾಜು ಹೇಳಿದರು.
ತುಮಕೂರಿನ ವಿವಿ ಕಲಾ ಕಾಲೇಜಿನ ಸ್ನಾತಕ ಮಹಿಳಾ ವಿದ್ಯಾರ್ಥಿ ನಿಲಯವು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೌಂದರ್ಯಕ್ಕೆ ಮೈಬಣ್ಣ ಮಾನದಂಡವಲ್ಲ.ಆಕರ್ಷಣೆಗೆ ಒಳಗಾಗುವ ವಯಸ್ಸಿದು.ಪ್ರೀತಿ, ಮದುವೆ ಎಂಬ ಮೋಹಕ್ಕೆ ಒಳಗಾಗಬೇಡಿ. ಪೋಷಕರ ನಂಬಿಕೆ ಉಳಿಸಿಕೊಂಡು, ಕಂಡ ಕನಸನ್ನು ನನಸಾಗಿಕೊಳ್ಳಲು ಶ್ರಮವಹಿಸಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಹಿರಿಯ ಲೇಖಕಿ ಬಾ. ಹಾ.ರಮಾಕುಮಾರಿ ಮಾತನಾಡಿ, ಶೈಕ್ಷಣಿಕ ಅಥವಾ ಉದ್ಯೋಗದ ಹಿತದೃಷ್ಟಿಯಿಂದ ಇತರೆ ಭಾಷೆಗಳನ್ನು ಕಲಿಯಿರಿ. ಅಂತಾರಾಷ್ಟ್ರೀಯ ಸಂವಹನಕ್ಕೆ ಮಾತ್ರ ಇಂಗ್ಲಿಷ್ ಸೀಮಿತವಾಗಬೇಕು. ನಮ್ಮ ಮಾತೃಭಾಷೆ ಕನ್ನಡ ಆತ್ಮವಿಶ್ವಾಸ, ದೃಢತೆ ಮತ್ತುಆತ್ಮಸ್ಥೈರ್ಯ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಸಿ. ಎಂ. ರವಿ, ಬದುಕಿನ ಹಿನ್ನೋಟದ ಹಿನ್ನೆಲೆಯಲ್ಲಿ ಮುನ್ನೋಟವನ್ನು ರೂಪಿಸಿಕೊಂಡು ಯಾಂತ್ರಿಕ ಯುಗದಲ್ಲಿ ನಿಮ್ಮ ಜೀವನದ ಹಾದಿ ಸುಲಭವಾಗಿ ಮಾಡಿಕೊಳ್ಳಿ. ಶಿಕ್ಷಣವೆಂದರೆ ಅರಿವು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ನಿಲಯ ಪಾಲಕಿ ಡಾ.ವನಜಾಕ್ಷಿ, ಬದುಕಿನಲ್ಲಿ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಂಡಾಗ ಸಾಧಿಸುವ ಛಲ ಮೂಡುವುದು. ಶಿಕ್ಷಣ ಸರ್ವರನ್ನೂ ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದರು.
ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಎಂ.ಪ್ರಕಾಶ್, ಸಹ ಪ್ರಾಧ್ಯಾಪಕ ಡಾ.ಜಿ. ರಾಮಕೃಷ್ಣ ಹಾಜರಿದ್ದರು.


