ವಕೀಲ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಕೀಲ ರವಿಕುಮಾರ್ ಅವರು ರೈಲ್ವೆ ಕಾಮಗಾರಿ ಗುತ್ತಿಗೆದಾರರಾದ ಪ್ರಸನ್ನ ಕುಮಾರ್, ಕುಶಾಲ್ ನಾರಾಯಣ್, ವೀರೇಶ್ ಕುಸುಮ್ ಸಹಚರರ ಕುಮ್ಮಕ್ಕಿನಿಂದ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನನ್ನ ಬಲಗಣ್ಣಿಗೆ ಕೈಯಿಂದ, ಲಾಟಿಯಿಂದ ಗುದ್ದಿದರು. ನನ್ನ ಬೆನ್ನಿಗೆ ಲಾಠಿಯಿಂದ ತೀವ್ರವಾಗಿ ಗುದ್ದಿದರು. ಎಡಗಾಲಿನ ತೊಡೆಗೆ ಬೂಟುಗಾಲಿನಿಂದ ಒದ್ದರು. ತಲೆಗೆ ಹಲ್ಲೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನನ್ನು ಹಿಡಿದು ಎಳೆದಾಡಿ ಮುಷ್ಠಿಯಿಂದ ಗುದ್ದಿದರು ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಅಷ್ಟೇ ಅಲ್ಲದೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನನ್ನನ್ನು ಮಣ್ಣಿಗೆ ಕೆಡವಿ ದರದರನೆ ಎಳೆದುಕೊಂಡು ಠಾಣೆಗೆ ಹೋದರು. ನನ್ನ ತಂದೆಗೆ ವಯಸ್ಸಾಗಿದ್ದರೂ ಅವರಿಗೂ ಹಲ್ಲೆ ಮಾಡಿದ್ದಾರೆ. ಸ್ವತ್ತಿಗೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇರುವ ಬಗ್ಗೆ ವಿಚಾರ ತಿಳಿಸಿದರೂ ನನ್ನ ಮತ್ತು ನನ್ನ ತಂದೆಯ ಮೇಲೆ ದೌರ್ಜನ್ಯ ಎಸಗಿದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಸೆಕ್ಷನ್ 115(2), ಸೆಕ್ಷನ್ 118(1), ಸೆಕ್ಷನ್ 351(2), ಸೆಕ್ಷನ್ 352 ಮತ್ತು 54 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.