ರಾಜ್ಯದಲ್ಲಿ ನಡೆದ ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ ಹೋರಾಟಗಳಾಗಿವೆ. ಜನರ ನಡುವೆಯೇ ಇದ್ದ, ಅವರ ನೋವು, ನಲಿವುಗಳಿಗೆ ದನಿಯಾಗಿದ್ದ ದಸಂಸ, ಇದನ್ನು ಕನ್ನಡ ವಿವಿಯ ಆಧ್ಯಯನ ವರದಿಗಳು ದೃಢಪಡಿಸಿವೆ ಎಂದು ಹಿರಿಯ ಗಾಯಕ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರಿನ ಪಾವನ ಆಸ್ಪತ್ರೆಯಲ್ಲಿ ಬಹಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಲಿತ ಚಳವಳಿಯ ಆರಂಭದಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ತಾಯ್ತತನದಿಂದ ಕೆಲಸ ಮಾಡಿದ್ದರು. ಹಾಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು ಎಂದರು.
ಜಗತ್ತು ಸರ್ವಾಧಿಕಾರಿಯನ್ನು ಬೆಳೆಯಲು ಬಿಟ್ಟಿಲ್ಲ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೆ.ದೊರೈರಾಜು ಮಾತನಾಡಿ, ಇಂದು ದೇಶದಲ್ಲಿ ಜಾತೀಯತೆ, ಕೋಮು ಪ್ರಚೋದನೆ ಹೆಚ್ಚಲು, ಹಿರಿಯರು ನಮ್ಮ ಪರಂಪರೆ, ಸಂಸ್ಕೃತಿಯನ್ನು ಕಿರಿಯರಿಗೆ ತಿಳಿಸದೆ ಇರುವುದು. ದಸಂಸ ಹುಟ್ಟಿಗೆ ಕಾರಣ ಏನು?, ಅದರ ಸಾಧನೆಗಳೇನು? ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಒಡೆದು ಆಳುವ ಸಂಸ್ಕೃತಿ ವಿರುದ್ದ ಯುವಕರಿಗೆ ವ್ಯವಸ್ಥಿತವಾಗಿ ಸಂಘಟಿಸಬೇಕಿದೆ ಎಂದರು.
ಈ ಜಗತ್ತು ಯಾವತ್ತು ಸರ್ವಾಧಿಕಾರಿಯನ್ನು ಬೆಳೆಯಲು ಬಿಟ್ಟಿಲ್ಲ. ನಾನು, ನನ್ನದು ಎಂಬುದು ಬಹು ಕಾಲ ನಿಲ್ಲದು, ನಾವು, ನಮ್ಮದು ಎಂಬುದಕ್ಕೆ ಎಂದಿಗೂ ಮನ್ನಣೆ ಇದೆ. ಇದನ್ನು ಇತಿಹಾಸವೇ ತಿಳಿಸಿಕೊಟ್ಟಿದೆ. ನಾನು ಎಷ್ಟೇ ಆರೋಗ್ಯವಂತನಾಗಿದ್ದರೂ, ನನ್ನ ಸುತ್ತಮುತ್ತ ಕೊಳಕು ಇದ್ದರೆ, ನನ್ನನ್ನು ಒಂದು ದಿನ ಕೊಳೆಯುವಂತೆ ಮಾಡುತ್ತದೆ ಎಂಬ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕೆಲಸವನ್ನು ಇನ್ನೊಬ್ಬರು ಮುಂದುವರೆಸಿಕೊಂಡು ಹೋಗುವುದನ್ನು ನೋಡಿದಾಗ, ಅವರು ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಹೇಳಿದರು.
ಪಾವನ ಆಸ್ಪತ್ರೆಯ ಮುಖ್ಯಸ್ಥ ಡಾ.ಮುರುಳೀಧರ ಪ್ರಾಸ್ತಾವಿಕ ಮಾತನಾಡಿ, ಇಂದು ಕರ್ಮಯೋಗಿ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮ ದಿನ. ಇಂದು ಅವರ ನೆನಪಿನಲ್ಲಿ ಅವರ ಬದುಕು, ಹೋರಾಟ ಕುರಿತು ಪುಸ್ತಕವೊಂದನ್ನು ಹೊರತರುವ ಪ್ರಯತ್ನ ನಡೆದಿತ್ತು. ಅತಿಥಿಗಳ ದಿನಾಂಕ ಸರಿಹೊಂದದ ಕಾರಣ ಸಾಧ್ಯವಾಗಲಿಲ್ಲ. ಹಾಗಾಗಿ ಸಾಧಕರನ್ನು ಸನ್ಮಾನಿಸುವ ಕೆಲಸ ನಡೆದಿದೆ ಎಂದರು.
ಕೃಷ್ಣಮೂರ್ತಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಮೈತ್ರಿ ನ್ಯೂಸ್ ಸಂಪಾದಕ ಹೆಚ.ವಿ.ವೆಂಕಟಾಚಲ, ಗಾಯಕ ಪಿಚ್ಚಳಿ ಶ್ರೀನಿವಾಸ್ ಅವರನ್ನು ಕರ್ಮಯೋಗಿ ಬೆಲ್ಲದಮಡು ರಂಗಸ್ವಾಮಿ ಟ್ರಸ್ಟ್ ನಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ.ಪಾವನ, ದಸಂಸ ಹಿರಿಯರಾದ ನರಸಿಂಹಯ್ಯ, ನರಸೀಯಪ್ಪ, ಬೆಲ್ಲದಮಡು ರಂಗಸ್ವಾಮಿ ಅವರ ಸಹೋದರರಾದ ಶಿವಣ್ಣ, ಕೃಷ್ಣಪ್ಪ ಇದ್ದರು.