ತುಮಕೂರು ತಾಲೂಕು ಹೊನ್ನೇನಹಳ್ಳಿಯಲ್ಲಿ ರೈಲ್ವೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ಸಿಪಿಐ ದಿನೇಶ್ ಕುಮಾರ್, ವಕೀಲ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತುಮಕೂರು ವಕೀಲರು ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಕೀಲ ರವಿಕುಮಾರ್ ಮೇಲೆ ಹಲ್ಲೆ ನಡೆಸಿರುವ ಸಿಪಿಐ ದಿನೇಶ್ ಕುಮಾರ್ ಅವರನ್ನು ಅಮಾನತಪಡಿಸಬೇಕು ಎಂದು ಆಗ್ರಹಿಸಿದರು.
ವಕೀಲ ರವಿಕುಮಾರ್ ಮಾಧ್ಯಮಗಳ ಮುಂದೆ ಮಾತನಾಡಿ, ನಮ್ಮ ಭೂಮಿಯನ್ನು ಯಾವುದೇ ನೋಟೀಸ್ ನೀಡದೆ ವಶಪಡಿಸಿಕೊಂಡಿದೆ. ಇದನ್ನು ಅಧಿಕಾರಿಗಳಿಗೆ ಪ್ರಶ್ನಿಸಿದ್ದಕ್ಕೆ ಏಕಾಏಕಿ ಬಂದ ಸಿಪಿಐ ದಿನೇಶ್ ಕುಮಾರ್ ನನಗೆ ಹೊಡೆದರು. ಬೂಟು ಗಾಲಿನಿಂದ ಒದ್ದರು. ಷರ್ಟ್ ಅನ್ನು ಹಿಡಿದು ಕೈದಿಗಳನ್ನು ಎಳೆದುಕೊಂಡು ಬಂದಂತೆ ಎಳೆದರು. ನಾನು ಏನೂ ಮಾಡಲಿಲ್ಲ. ಆದರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.
ವಕೀಲರು ಅಂತ ಗೊತ್ತಿದ್ದರೂ ನನ್ನ ಮೇಲೆ ಹೊಡೆದಿದ್ದಾರೆ. ಬಡಿದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ಸಿಪಿಐ ದಿನೇಶ್ ಕುಮಾರ್ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಎಸ್.ಪಿ ಅಶೋಕ್ ಅವರನ್ನು ಸುತ್ತುವರೆದ ವಕೀಲರು ಸಿಪಿಐ ಅಮಾನತಿಗೆ ಪಟ್ಟುಹಿಡಿದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ವಕೀಲರು ಸಹ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಪಾಲಾಕ್ಷಯ್ಯ, ಭಾರತಿ, ವಕೀಲರಾದ ನವೀನ್ ನಾಯಕ್, ಹಲ್ಲೆಗೊಳಗಾದ ರವಿಕುಮಾರ್, ಈ.ಶಿವಣ್ಣ, ಮಹಾವೀರ್ ಜೈನ್ ಮೊದಲಾದವರು ಇದ್ದರು.