ಯುವ ಕಲಾವಿದರು ರಂಗಭೂಮಿಯನ್ನು ಪ್ರಯೋಗಾತ್ಮಕವಾಗಿ ಮುನ್ನಡೆಸುವ ಅಗತ್ಯವಿದೆ ಎಂದು ಹಿರಿಯ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ ದಾಸ್ ಕರೆ ನೀಡಿದ್ದಾರೆ.
ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಯುವ ಕಲಾವಿದ ಶ್ರೀನಿವಾಸಮೂರ್ತಿ ನಿನಾಸಂ ಅವರ ನೇತೃತ್ವದ “ರಂಗಾರಂಭ” ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯುವ ಗುರುತರ ಜಬಾವ್ದಾರಿ ಇಂದಿನ ಯುವ ಕಲಾವಿದರ ಮೇಲಿದೆ. ಇವರು ಮತ್ತಷ್ಟು ಪ್ರಯೋಗಿಕವಾಗಿ ತೊಡಗಿಕೊಂಡರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಗಳಿಗೇನಹಳ್ಳಿಯಂತಹ ಕುಗ್ರಾಮದಲ್ಲಿ ಹುಟ್ಟಿ,ನೀನಾಸಂನಲ್ಲಿ ರಂಗ ತರಬೇತಿ ಪಡೆದು,ಗಾಡ್ ಫಾದರ್‌ಗಳಿಲ್ಲದೆ ಈ ರಂಗದಲ್ಲಿಯೇ ಬೆಳೆಯಲು ಮನಸ್ಸು ಮಾಡಿರುವ ಶ್ರೀನಿವಾಸಮೂರ್ತಿ ಅಂತಹ ಯುವಕರ ಅಗತ್ಯ ರಂಗಭೂಮಿಗೆ ಇದೆ. ನಿಸ್ವಾರ್ಥ ಸೇವೆಗೆ ಮಾತ್ರ ರಂಗಭೂಮಿಯಲ್ಲಿ ಉತ್ತುಂಗಕ್ಕೆರಲು ಅವಕಾಶಗಳು ದೊರೆಯುತ್ತವೆ. ಅಂತಹ ಅವಕಾಶಗಳು ರಂಗಾರಂಭ ಸಂಸ್ಥೆಗೂ ಲಭಿಸುವಂತಾಗಲಿ ಎಂದು ಶುಭು ಕೋರಿದರು.
ಹಿರಿಯ ರಂಗಕರ್ಮಿ ಎಸ್.ಎಲ್.ಎನ್.ಸ್ವಾಮಿ ಮಾತನಾಡಿ, ನಾಟಕ ಎಂದರೆ ಸುಳ್ಳು ಹೇಳುವುದು ಎಂದರ್ಥ. ಇಲ್ಲಿ ವ್ಯಕ್ತಿಗಳು ಪಾತ್ರಧಾರಿಗಳಾಗಿ ಅಭಿನಯಿಸುವ ಮೂಲಕ ಈಗ ನಮ್ಮ ಮುಂದಿಲ್ಲದ ರಾಮ, ರಾವಣ, ಶ್ರೀಕೃಷ್ಣ, ಅರ್ಜುನ, ದುರ್ಯೋದನ, ಸೀತೆ, ಕೈಕೆ, ಮಂಡೋದರಿಯನ್ನು ಪ್ರೇಕ್ಷಕರ ಮುಂದಿಡುತ್ತಾರೆ ಎಂದರು.
ಇದೇ ವೇಳೆ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ವೈ.ಎನ್.ಶಿವಣ್ಣ, ಎಂ.ವಿ.ನಾಗಣ್ಣ, ಯೋಗಾನಂದ ಕುಮಾರ್, ಜಕ್ಕೇನಹಳ್ಳಿ ಎಸ್.ರಾಜಣ್ಣ, ಚಿದಾನಂದಮೂರ್ತಿ, ಹಿರಿಯ ಕಲಾವಿದರಾದ ಭಾಗ್ಯಮ್ಮ, ಆಶಾರಾಣಿ, ಹೆಚ್.ಎಸ್.ಪರಮೇಶ್, ಶ್ರೀನಿವಾಸಮೂರ್ತಿ ನೀನಾಸಂ ಮತ್ತಿತರರು ಹಾಜರಿದ್ದರು.