ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಲೇಖಕಿ ಕಮಲ ಹಂಪನಾ, ಭಾರತೀಯ ಸಂಸ್ಕೃತಿಯ ಮೂಲಬೇರಾದ ಬಹುತ್ವದ ಪ್ರತಿಪಾದಕರಾಗಿದ್ದರು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮ ಶಿವಮೂರ್ತಿ ತಿಳಿಸಿದ್ದಾರೆ.
ತುಮಕೂರಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ನಾಡೋಜ ಸಾಹಿತಿ ಕಮಲ ಹಂಪನಾ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓರ್ವ ಸಂಶೋಧಕಿಯಾಗಿ, ಕಥೆಗಾರ್ತಿಯಾಗಿ, ವಿಮರ್ಶಕಿಯಾಗಿ, ವೈಚಾರಿಕ ಲೇಖಕಿಯಾಗಿ ಅವರ ಬರಹಗಳಲ್ಲಿ ಬಹುತ್ವದ ಅಂಶಗಳನ್ನು ಕಾಣಬಹುದು ಎಂದರು.
ಜೈನ ಸಾಹಿತ್ಯದ ಮೊದಲ ಸಂಶೋಧಕಿಯಾಗಿ ಕಾಲಿರಿಸಿದ ಕಮಲ ಹಂಪನಾ. ತಮ್ಮ ಅನೇಕ ಕೃತಿಗಳಲ್ಲಿ ತಾವು ಬೆಳೆದು ಬಂದ ಪರಿಸರ, ತಮ್ಮ ಬದುಕಿನ ಮೇಲೆ ಸಿದ್ದಗಂಗಾ ಮಠದ ಪ್ರಭಾವ ಕುರಿತು ಸಾಕಷ್ಟು ಬರೆದಿದ್ದಾರೆ. ಇವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರ ಬಹುತ್ವದ ಪ್ರತಿಪಾದಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ನಾಡೋಜ ಹಂಪಾ ನಾಗರಾಜಯ್ಯ ಮಾತನಾಡಿ, ತುಮಕೂರು ನನ್ನ ಬದುಕಿಗೆ ಮಹತ್ವದ ತಿರುವುಕೊಟ್ಟ ಸ್ಥಳ. 1953ರಲ್ಲಿ ಕಮಲ ಅವರ ಸ್ನೇಹದೊಂದಿಗೆ ಆರಂಭಗೊಂಡು 63 ವರ್ಷಗಳ ದಾಂಪತ್ಯ ಜೀವನ ಅವಿಸ್ಮರಣೀಯ.ಕೌಟುಂಬಿಕ ಕೆಲಸಗಳ ಜೊತೆಗೆ, ವೃತ್ತಿಯಲ್ಲಿಯೂ ಒಳ್ಳೆಯ ಹೆಸರುಗಳಿಸಿದ್ದರು. ಮಹಿಳಾ ವಿವಿ ಸ್ಥಾಪನೆ, ಅತಿಮೊಬ್ಬೆ ಪ್ರಶಸ್ತಿ ಸ್ಥಾಪನೆಯ ಹಿಂದೆ ಕಮಲ ಅವರ ಹೋರಾಟವಿದೆ. ಬದುಕಿನುದ್ದಕ್ಕೂ ದ್ವನಿ ಇಲ್ಲದವರ ಮುಖವಾಣಿಯಾಗಿ ಬದುಕಿದ್ದ ಕಮಲ, ಬದುಕು ಮತ್ತು ಬರಹದ ಮೂಲಕ ಘನತೆಯನ್ನು ಕಾಪಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರೊ.ಕಮಲ ಹಂಪನಾ ನನ್ನಂತಹ ಅನೇಕ ಲೇಖಕಿಯರಿಗೆ ಉತ್ತಮ ಮಾರ್ಗದರ್ಶಕಿಯಾಗಿದ್ದಾರೆ. ಎಲ್ಲರನ್ನು ಪ್ರೀತಿಸುವ ಅವರ ಗುಣ ಮೆಚ್ಚುವಂತಹದ್ದು, ತುಮಕೂರಿನಲ್ಲಿ ನಡೆದ ಮೊದಲ ಕನ್ನಡ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ನಮಗೆ ಮಾರ್ಗದರ್ಶನ ನೀಡಿ, ಯಶಸ್ವಿಯಾಗಲು ಕಾರಣರಾದವರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು.