ತುಮಕೂರು ತಾಲ್ಲೂಕಿನ ಮೈದಾಳ ಕೆರೆಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ 12 ಗಂಟೆಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ.
ತುಮಕೂರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಬ್ಬಿ ತಾಲ್ಲೂಕಿನ ಶಿವರಾಂಪುರ ನಿವಾಸಿ ಹಂಸ (19) ಎಂಬಾಕೆಯೇ ಸಾವನ್ನು ಗೆದ್ದು ಬಂದಿರುವ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ಹಂಸ ಗೆಳತಿಯರ ಜತೆ ಮಂದರಗಿರಿ ಬೆಟ್ಟದ ವೀಕ್ಷಣೆಗೆ ಭಾನುವಾರ ಮಧ್ಯಾಹ್ನ ತೆರಳಿದ್ದರು. ಅಲ್ಲೇ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ಬಳಿ ಹೋಗಿದ್ದಾರೆ. ಕೋಡಿ ನೀರು ಹರಿಯುವುದರಿಂದ ಖುಷಿಯಾದ ವಿದ್ಯಾರ್ಥಿನಿ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು.
ಸೋಮವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಕೈಗೊಂಡಾಗ ಕಲ್ಲಿನ ಪೊಟರೆಯಲ್ಲಿ ವಿದ್ಯಾರ್ಥಿನಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಭಾನುವಾರ ಸಂಜೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬಂತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಗೆ ಪಾರೇ ಇಲ್ಲದಂತಾಗಿದೆ.
ವಿದ್ಯಾರ್ಥಿನಿ ಹಂಸ ಜೀವಂತವಾಗಿರುವ ವಿಷಯ ತಿಳಿದ ಕೂಡಲೇ ಎಸ್‌ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ವಿದ್ಯಾರ್ಥಿನಿ ಹಂಸರವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಐಟಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯನ್ನು ನೋಡಲು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ದೃಶ್ಯ ಕಂಡು ಬಂತು.