Thursday, November 21, 2024
Google search engine
Homeಮುಖಪುಟ‘ಸೆಮಿಸ್ಟರ್ ಪದ್ದತಿ ಅಂಕ ಗಳಿಕೆಗಷ್ಟೇ ಸೀಮಿತ’

‘ಸೆಮಿಸ್ಟರ್ ಪದ್ದತಿ ಅಂಕ ಗಳಿಕೆಗಷ್ಟೇ ಸೀಮಿತ’

ಇಂದಿನ ಸೆಮಿಸ್ಟರ್ ಶಿಕ್ಷಣ ಪದ್ದತಿ ಕೇವಲ ಅಂಕ ಗಳಿಕೆಗಷ್ಟೇ ಸಿಮಿತವಾಗಿದೆ. ಆಟೋಟಗಳಿಗೆ, ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಹಂಪಿ ವಿವಿ ಕುಲಪತಿ ಡಾ.ಪರಶಿವಮೂರ್ತಿ ಕಳವಳ ವ್ಯಕ್ತಪಡಿಸಿದರು.

ಇದರ ನಡುವೆಯೂ ಕೆಲವರು ತುಂಬೆ ಸ್ಮರಣ ಸಂಚಿಕೆಗೆ ಕಥೆ, ಕವನ, ಲೇಖನಗಳನ್ನು ಬರೆದಿದ್ದೀರ. ಮುಂದಿನ ವರ್ಷದ ಸಂಚಿಕೆಯಲ್ಲಿ ಇದು ದುಪ್ಪಟ್ಟಾಗಬೇಕು. ತುಂಬೆ ಅತ್ಯಂತ ನಿಕೃಷ್ಟವಾಗಿರುವ ಗಿಡ ಆದರೆ ಅದರ ಹೂವು ಶಿವನಿಗೆ ಶ್ರೇಷ್ಠ. ತುಮಕೂರು ಜಿಲ್ಲೆ ಸಹ ಬಡತನ, ಸಿರಿತನ ಎರಡನ್ನು ಹೊಂದಿದೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಬಹಳ ಪ್ರಸಿದ್ದಿ ಪಡೆದಿದೆ ಎಂದರು.

ವಿದ್ಯಾರ್ಥಿ ಯುವಜನರಲ್ಲಿರುವ ಸುಪ್ತ ಪ್ರತಿಭೆಗಳನ್ನು, ಅವರಲ್ಲಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಕಾಲೇಜು ಮ್ಯಾಗಜೀನ್ ಒಂದು ಸೃಜನಶೀಲ ವೇದಿಕೆಯಾಗಿದ್ದು ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತುಮಕೂರು ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2024ನೇ ಸಾಲಿನ ವಾರ್ಷಿಕ ಸ್ಮರಣ ಸಂಚಿಕೆ ತುಂಬೆ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳಲ್ಲಿ ಹಿಂಜರಿಕೆ ಎಂಬುದು ಬಹಳಷ್ಟು ಕೆಲಸ ಮಾಡುತ್ತದೆ. ಹಾಗಾಗಿ ಗ್ರಾಮೀಣ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕಾಗಿದೆ. ತಮ್ಮ ಸುತ್ತಮುತ್ತ ಕಂಡುಬರುವ ಘಟನೆಗಳು, ತಮ್ಮ ಬದುಕಿನ ವೃತ್ತಾಂತಗಳನ್ನೇ ಕವನ, ಕಥೆ, ಲೇಖನ, ಹಾಸ್ಯ, ವಿಡಂಬನೆಯ ಮೂಲಕ ಅಭಿವ್ಯಕ್ತಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಇದರಿಂದ ನಿಮಗೆ ಭಾಷೆಯ ಮೇಲೆ ಹಿಡಿತ ಸಿಗುತ್ತದೆ ಎಂದರು.

ಉರ್ದು ವಿಭಾಗದ ಮುಖ್ಯಸ್ಥೆ ಹಾಗೂ ತುಂಬೆ ಸ್ಮರಣ ಸಂಚಿಕೆ ಗೌರವ ಸಂಪಾದಕಿ ತರನ್ನುಂ ನಿಖತ್ ಮಾತನಾಡಿ,ಮೊಬೈಲ್ ನಿಮ್ಮಲ್ಲಿರುವ ಪ್ರತಿಭೆಯನ್ನು ಕುಗ್ಗಿಸುತ್ತಿದ್ದು, ಅದನ್ನು ಬದಿಗಿಟ್ಟು, ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುವಂತೆ ಸಲಹೆ ನೀಡಿದರು.

ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಡಾ.ತಿಪ್ಪೇಸ್ವಾಮಿ, ಪ್ರಾಂಶುಪಾಲೆ ಟಿ.ಡಿ.ವಸಂತ ಮಾತನಾಡಿದರು. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಪದ್ಮನಾಭ. ಉಪನ್ಯಾಸಕರಾದ ರೇಣುಕಾ ಪ್ರಸನ್ನ, ಯೋಗೀಶ್, ಅನುಸೂಯ ಮೊದಲಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular