ರೈತರು ಕೃಷಿಯನ್ನು ಬಿಟ್ಟು, ಗ್ರಾಮಿಣ ಪ್ರದೇಶವನ್ನು ತೊರೆದು ಉದ್ಯೋಗಕ್ಕಾಗಿ ನಗರ ಪ್ರದಶಗಳಿಗೆ ವಲಸೆ ಬರುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಎಐಕೆಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ನೀತಿಗಳಿಂದಾಗಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಉದ್ಯೋಗ ಖಾತ್ರಿ ಯೋಜನೆಯು ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕಾದರೆ ಸಣ್ಣ ರೈತರ ಹೊಲದಲ್ಲಿ ಕೆಲಸ ಮಾಡಿಸಿ ಆ ಹಣವನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ನೈಜ ಫಲಾನುಭವಿಗಳಿಗೆ ನೀಡುವಂತಾಗಬೇಕು ಎಂದು ಹೇಳಿದರು.
ಪ್ರಸ್ತುತ ವರದಿಯ ಪ್ರಕಾರವಾಗಿ 2050ಕ್ಕೆ ಈಗ ಇರುವ ಅರ್ಧದಷ್ಟು ಜನರು ಕೃಷಿಯನ್ನು ತೊರೆದು ನಗರವಾಸಿಗಳಾಗುತ್ತಾರೆ ಎನ್ನುವ ಆಘತಕಾರಿ ವಿಷಯ ನಮ್ಮ ಮುಂದಿದೆ. ಕೃಷಿ ಉಳಿದರೆ ದೇಶ ಉಳಿಯುತ್ತದೆ ಎನ್ನುವ ಅಂಶವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದಕ್ಕಾಗಿ ಸರ್ಕಾರಗಳು ಗಮನಹರಿಸುವ ರೀತಿಯಲ್ಲಿ ಎಐಕೆಎಸ್ ಹೋರಾಟಗಳನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ಲೋಕೇಶ್, ಕಾರ್ಯಾಧ್ಯಕ್ಷ ಮೌಲಮುಲ್ಲಾ, ಕಾರ್ಯದರ್ಶಿ ಡಾ. ಜನಾರ್ಧನ್, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಎಐಕೆಎಸ್ ಜಿಲ್ಲಾ ಸಂಚಾಲಕ ಕಂಬೇಗೌಡ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.