ಆಘ್ಘಾನಿಸ್ತಾನ ರಾಜಧಾನಿ ಕಾಬೂಲ ನಗರವನ್ನು ತಾಲಿಬಾನ್ ಪಡೆಗಳು ಸುತ್ತುವರಿದಿರುವುದರಿಂದ ಆಫ್ಘಾನ್ ಅಧ್ಯಕ್ಷ ಅಶ್ರಪ್ ಘನಿ ಕಾಬೂಲ್ ತೊರೆದು ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಅಧ್ಯಕ್ಷರ ಕಚೇರಿಯು ಘನಿ ನಗರ ತೊರೆದಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭದ್ರತಾ ಕಾರಣಗಳಿಗಾಗಿ ಅಶ್ರಪ್ ಘನಿ ಪಕ್ಕದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ತಾಲಿಬಾನ್ ಪ್ರತಿನಿಧಿಗಳು ಅಶ್ರಪ್ ಘನಿ ಎಲ್ಲಿದ್ದಾರೆಂಬ ಬಗ್ಗೆ ಕಾಬೂಲನ್ನು ಪರಿಶೀಲಿಸಿದ್ದಾರೆ.
ತಾಲಿಬಾನ್ ಹೋರಾಟಗಾರರು ಕಾಬೂಲ್ ಪ್ರವೇಶದ್ವಾರದಲ್ಲಿ ಕಾಯುತ್ತಿದ್ದಾರೆ. ಶಾಂತಿಯುತ, ತೃಪ್ತಿದಾಯಕ ಅಧಿಕಾರ ವರ್ಗಾವಣೆ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ ಎಂದು ರಾಯಿಟರ್ ಸುದ್ದಿ ಸಂಸ್ಥೆ ತಿಳಿಸಿದೆ.
ಆಫ್ಘಾನಿಸ್ತಾನವನ್ನು ತಾಲಿಬಾನಿಗಳಿಗೆ ಹಸ್ತಾಂತರಿಸುವ ಚರ್ಚೆ ನಡೆಯುತ್ತಿದ್ದು ಅಮೆರಿಕಾ ಅಧಿಕಾರಿಗಳು ಈ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ.
ತಾಲಿಬಾನ್ ದಾಳಿಯಿಂದ ನಗರದ ಜನರು ಭಯಭೀತರಾಗಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೆ ಇದುವರೆಗೂ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿಲ್ಲ. ವಿಶ್ವಸಂಸ್ಥೆ ಎಲ್ಲಿ ಎಂಬ ಪ್ರಶ್ನೆಗಳನ್ನು ಟ್ವಿಟ್ಟರ್ ನಲ್ಲಿ ಕೇಳಲಾಗುತ್ತಿದೆ.