ಪ್ರಧಾನಿ ನರೇಂದ್ರಮೋದಿ ಅವರು ದೆಹಲಿಯ ಕೆಂಪುಕೋಟೆಯ ಮೇಲೆ ಮಾಡಿರುವ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಯಾವುದೇ ಹುರುಳಿಲ್ಲ. ರೈತ ಸಮುದಾಯಕ್ಕೆ ಕಂಟಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವ ಖಚಿತ ಭರವಸೆಯನ್ನೂ ನೀಡಿಲ್ಲ ಎಂದು ಪ್ರತಿಪಕ್ಷಗಳು ದೂರಿವೆ.
ಮಾಧ್ಯಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಏಳು ವರ್ಷಗಳಿಂದ ಹೇಳಿದ್ದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಭಾಷಣದಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಾರೆಯೇ ವಿನಃ ಅವುಗಳ ಅನುಷ್ಠಾನವಾಗಿಲ್ಲ” ಎಂದು ಲೇವಡಿ ಮಾಡಿದ್ದಾರೆ.
“ಹೊಸ ಯೋಜನೆಗಳನ್ನು ಪ್ರಕಟಿಸುವುದು ಮಾತ್ರ ಪ್ರಧಾನಿಯವರಿಗೆ ಗೊತ್ತು. ಆ ಯೋಜನೆಗಳ ಅನುಷ್ಠಾನವಾಗಿಲ್ಲ. ವಾಸ್ತವವಾಗಿ ಅವುಗಳು ಎಲ್ಲಿಯೂ ಅನುಷ್ಠಾನ ಕಂಡಿಲ್ಲ. ಸಣ್ಣ ರೈತರ ಬಗ್ಗೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಕುರಿತೂ ಒಂದು ಸಣ್ಣ ಮಾತು ಇಲ್ಲ” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರೈತರಿಗಾಗಿ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೈತರ ಸಾಲ ಮನ್ನಾ ಮಾಡಲಾಗಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಮಾಧ್ಯಮ ವಕ್ತಾರ ರಣದೀಪ್ ಸುರ್ಜಿವಾಲ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿಯವರು ಮೂಲಭೂತ ಸೌಕರ್ಯ ವಲಯಕ್ಕೆ ರೂ. 100 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಎರಡು ವರ್ಷಗಳ ಹಿಂದೆ ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಕುರಿತು ಟ್ವೀಟ್ ಮಾಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ “ಪ್ರಧಾನಿ ಭಾಷಣ ವಾಗ್ಝರಿಯಿಂದ ಕೂಡಿದೆ. ಖಾಲಿ ಘೋಷಣೆಗಳು ಮತ್ತು ಮಾಹಿತಿರಹಿತ ಭಾಷಣ ಆಗಿದೆ” ಎಂದು ಟೀಕೆ ಮಾಡಿದ್ಆರೆ.
ಕೊವಿಡ್-19ರ ತಪ್ಪು ನಿರ್ವಹಣೆ ಮತ್ತು ವಾಕ್ಸಿನ್ ಕೊರತೆಯಿಂದ ದೇಶದ ಕೋಟ್ಯಂತರ ಜನರು ನರಳುತ್ತಿದ್ದರೂ ಇದರ ಬಗ್ಗೆ ಖಚಿತ ಮಾಹಿತಿ ನೀಡುತ್ತಿಲ್ಲ. ಅಷ್ಟೇ ಅಲ್ಲ ನಿರುದ್ಯೋಗ, ಬಡತನ, ಹಸಿವು ಹೆಚ್ಚಳ ಮತ್ತು ಅಡೆತಡೆಯಿಲ್ಲದೆ ಏರುತ್ತಿರುವ ಬೆಲೆಗಳ ಕುರಿತು ಪ್ರಧಾನಿ ಪ್ರಸ್ತಾಪ ಮಾಡಿಲ್ಲ ಎಂದು ಆರೋಪಿಸಿದ್ದಾರೆ.