ಆಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಗೆ ಅಧಿಕಾರವನ್ನು ಶಾಂತಿಯುತವಾಗಿ ಹಸ್ತಂತರಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ತಾಲಿಬಾನ್ ಪಡೆಗಳು ಹಿಂಸಾಚಾರದಲ್ಲಿ ತೊಡಗಿರುವುದರಿಂದ ರಾಜತಾಂತ್ರಿಕರು ಮತ್ತು ನೂರಾರು ಭಾರತೀಯರ ಸುರಕ್ಷತೆತೆಯನ್ನು ಖಚಿತಪಡಿಸಬೇಕು ಎಂದು ಭಾರತ ಆಫ್ಘಾನಿಸ್ತಾವನ್ನು ಒತ್ತಾಯಿಸಿದೆ.
ತಾಲಿಬಾನ್ ಪಡೆಗಳ ಹಿಡಿತ ಹೆಚ್ಚುತ್ತಿರುವಂತೆಯೇ ಆಫ್ಘಾನಿಸ್ತಾನ ಸರ್ಕಾರ ತಾಲಿಬಾನೀಯರ ಜೊತೆ ಮಾತುಕತೆ ನಡೆಸಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಾತುಕತೆ ಅಗತ್ಯ. ತಾಲಿಬಾನಿಗಳು ರಾಜಧಾನಿ ಕಾಬೂಲ್ ನಗರವನ್ನು ಸುತ್ತುವರಿದಿದ್ದಾರೆ. ಹೀಗಾಗಿ ಅಧಿಕಾರ ಹಸ್ತಾಂತರ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತಾಲಿಬಾನೀಯರ ದಾಳಿಯಿಂದ ಸಾಕಷ್ಟು ಹಾನಿ ಉಂಟಾಗಿದೆ. ಮಾನವಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ. ಆದರೂ ವಿಶ್ವಸಂಸ್ಥೆ ಮಧ್ಯಪ್ರವೇಶಿಸುತ್ತಿಲ್ಲ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಅಮೆರಿಕಾ ಸೇನಾಪಡೆಗಳು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯುವವರೆಗೂ ತಾಲಿಬಾನಿಯರು ದಾಳಿ ನಡೆಸದಂತೆ ಕಾಯಬೇಕು ಎಂದು ಅಮೆರಿಕಾ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ನಡುವೆ “ನಾವು ಬಲವಂತವಾಗಿ ಕಾಬೂಲ್ ಅನ್ನು ವಶಪಡಿಸಿಕೊಳ್ಳುವುದಿಲ್ಲ. ಶಾಂತಿಯುತ ಹಸ್ತಾಂತರಕ್ಕೆ ಕಾಯುತ್ತಿದ್ದೇವೆ” ಎಂದು ತಾಲಿಬಾನ್ ಹೇಳಿದೆ ಎಂದು ಫಸ್ಟ್ ಪೋಸ್ಟ್ ವರದಿ ತಿಳಿಸಿದೆ.
ತಾಲಿಬಾನ್ ಹೋರಾಟಗಾರರು ಆಫ್ಘಾನಿಸ್ತಾನ ಸರ್ಕಾರದ ನಿಯಂತ್ರಣದಲ್ಲಿರುವ ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಆಫ್ಘಾನಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಮಾತುಗಳನ್ನು ಒಪ್ಪಿಕೊಳ್ಳಬೇಕೆಂಬ ಒತ್ತಡಗಳು ಹೆಚ್ಚುತ್ತಿರುವುದಾಗಿಯೂ ವರದಿಗಳು ಹೇಳಿವೆ.
ಆಫ್ಘಾನಿಸ್ತಾನದ ಇಂಟರಿಮ್ ಸಚಿವ ಅಬ್ದುಲ್ ಸತ್ತಾರ್ “ಅಧಿಕಾರವನ್ನು ಶಾಂತಿಯುತವಾಗಿ ವರ್ಗಾವಣೆ ಮಾಡಲು ಸಿದ್ದರಿದ್ದೇವೆ” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.