Friday, October 18, 2024
Google search engine
Homeಜಿಲ್ಲೆಪಾಲಿಕೆ ಚುನಾವಣೆಗೆ ಸಿದ್ದರಾಗಿ, ಟಿಕೆಟ್ ದೊರೆತವರಿಗೆ ಬೆಂಬಲ ನೀಡಿ

ಪಾಲಿಕೆ ಚುನಾವಣೆಗೆ ಸಿದ್ದರಾಗಿ, ಟಿಕೆಟ್ ದೊರೆತವರಿಗೆ ಬೆಂಬಲ ನೀಡಿ

ರಾಜಕಾರಣವೆಂಬುದು ಬಡವರ, ಸಮಾಜದ ಏಳಿಗೆಗಾಗಿ ಮಾಡುವ ಒಂದು ಸೇವೆ. ಹಾಗಾಗಿ ನನಗೆ ಎನ್ನುವುದು ಕೊನೆಯದಾಗಬೇಕು. ಕ್ಷೇತ್ರಗಳ ಪುನರ್ ವಿಂಗಡಣೆಯಾಗಿ, ವಾರ್ಡುಗಳ ಮೀಸಲಾತಿ ಬದಲಾವಣೆಯಾಗಿ ಯಾರಿಗೆ ಟಿಕೆಟ್ ದೊರೆತರು, ಅವರ ಗೆಲುವಿಗೆ ಉಳಿದವರು ಶ್ರಮಪಟ್ಟಾಗ ಮಾತ್ರ, ನಾಯಕನಾಗಿ ಗುರುತಿಸಿಕೊಳ್ಳಲು ಸಾಧ್ಯ. ಕೇವಲ ಟಿಕೆಟ್‌ಗೋಸ್ಕರ ಕೆಲಸ ಮಾಡಿ, ಟಿಕೇಟ್ ಸಿಗದಿದ್ದರೆ ತಟಸ್ಥರಾಗುವ ವ್ಯಕ್ತಿಗಳಿಂದ ಪಕ್ಷಕ್ಕೆ ಯಾವುದೇ ಉಪಯೋಗವಿಲ್ಲ. ತುಮಕೂರು ನಗರವನ್ನು ಅಭಿವೃದ್ದಿ ಹೊಂದಿದ ನಗರಗಳಲ್ಲಿ ಒಂದಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಹೇಳಿದರು.

ತುಮಕೂರು ಹೊರವಲಯದ ರಿಂಗ್ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತುಮಕೂರು ನಗರ ಬ್ಲಾಕ್ 1 ಮತ್ತು 2ರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಕ್ಷ ವಿರೋಧಿಗಳಿಗೆ ಪಕ್ಷದಲ್ಲಿ ಜಾಗವಿಲ್ಲ ಎಂಬುದನ್ನು ಈಗಾಗಲೇ ಕಟ್ಟುನಿಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೂತನ ಕಚೇರಿ ಉದ್ಘಾಟನೆ ವೇಳೆ ಸ್ಪಷ್ಟಪಡಿಸಿದ್ದಾರೆ. ಇಲ್ಲಿರುವ ಯಾವ ನಾಯಕರಿಗೂ ಟಿಕೆಟ್ ನೀಡುವ ಅಧಿಕಾರ ಇಲ್ಲ. ಆದರೆ ಜನರ ಅಭಿಪ್ರಾಯವನ್ನು ಪಕ್ಷದ ಮುಖಂಡರಿಗೆ ತಿಳಿಸುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವು ಕೂಡ ಪ್ರತಿ ವಾರ್ಡುಗೂ ಭೇಟಿ ನೀಡಿ ಅಲ್ಲಿನ ಮುಖಂಡರ ಅಭಿಪ್ರಾಯ ಆಲಿಸಿ, ಗೆಲ್ಲುವ ಅಭ್ಯರ್ಥಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಆಕಾಂಕ್ಷಿಗಳು ಮೊದಲು ವಾರ್ಡಿನ ಜನರನ್ನು ಭೇಟಿಯಾಗಿ ಅವರಿಂದ ಸಮಸ್ಯೆಗಳನ್ನು ಆಲಿಸಿ, ಅಲ್ಲದೆ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಿ ಎಂದು ಸಲಹೆ ನೀಡಿದರು.

ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಕಳೆದ ಮೂರುವರೆ ವರ್ಷಗಳ ಕಾಲ ತುಮಕೂರು ನಗರದ ಟೂಡಾ, ಕೆಲ ತಾ.ಪಂ.ಗಳಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸಿದ್ದು, ಅಲ್ಲಿ ಆಗಿರುವ ಲೋಪ ದೋಷಗಳು, ಕಾನೂನುಬಾಹಿರ ಚಟುವಟಿಕೆಗಳನ್ನು ಪಕ್ಷದ ಮುಖಂಡರು ಎತ್ತಿ ಹಿಡಿದು ಹೋರಾಟ ರೂಪಿಸಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಪಡೆಯಬೇಕಾದರೆ ಇಂದಿನಿಂದಲೇ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಶತಾಯ, ಗತಾಯ ತುಮಕೂರು ನಗರಪಾಲಿಕೆಯಲ್ಲಿ ಈ ಬಾರಿ ಸ್ವತಂತ್ರವಾಗಿ ಅಧಿಕಾರ ಹಿಡಿಯವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲೇಬೇಕಿದೆ ಎಂದರು.
ವೇದಿಕೆಯಲ್ಲಿ ಡಿಸಿಸಿ ಮಾಜಿ ಅಧ್ಯಕ್ಷ ರಾಮಕೃಷ್ಣ, ರೇವಣಸಿದ್ದಯ್ಯ, ಪಾಲಿಕೆ ಮಾಜಿ ಸದಸ್ಯ ಇನಾಯತ್, ಓಬಿಸಿ ಘಟಕ ಅಧ್ಯಕ್ಷ ಅನಿಲ್, ಮುಖಂಡ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular