Tuesday, December 3, 2024
Google search engine
Homeಮುಖಪುಟರಾಜ್ಯಪಾಲರ ಹಸ್ತಕ್ಷೇಪ ಸರಿಯಲ್ಲ-ಸಿದ್ದರಾಮಯ್ಯ

ರಾಜ್ಯಪಾಲರ ಹಸ್ತಕ್ಷೇಪ ಸರಿಯಲ್ಲ-ಸಿದ್ದರಾಮಯ್ಯ

ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರದ ಭಾರತೀಯ ಜನತಾ ಪಕ್ಷದ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನೇಮಕಗೊಂಡವರು. ಯಾವುದೇ ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ವಿಷಯದ ಕುರಿತು ರಾಷ್ಟ್ರದಾದ್ಯಂತ ಚರ್ಚೆಯಾಗಬೇಕು ಎಂದರು.

ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಜೊತೆಗಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ನ್ಯಾಯ ನನ್ನ ಪರವಾಗಿದೆ, ಇದನ್ನು ಎದುರಿಸಿ ಗೆಲ್ಲುತ್ತೇನೆ ಎಂದು ತಿಳಿಸಿದರು.

ನಮ್ಮ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಕ್ಕಿದೆ, ಅದಕ್ಕೆ ತಕ್ಕಂತೆ ನಾವು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಬೇಕೆಂದು ಜನಾದೇಶವಿದೆ. ಇದಕ್ಕೆ ರಾಜ್ಯಪಾಲರು ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ನಾವು ಅನಿವಾರ್ಯವಾಗಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಹೇಳಿದರು.

ನಾನು ಯಾವ ತಪ್ಪು ಮಾಡಿಲ್ಲವಾದ್ದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ. ಜಾಮೀನಿನ ಮೇಲಿರುವ ಕುಮಾರಸ್ವಾಮಿಯವರು ರಾಜೀನಾಮೆ ನೀಡಿದ್ದಾರೆಯೇ? ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ ಎಂದರು.

ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಭಾಷಣದಲ್ಲಿ ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳ ವಿರುದ್ಧ ದೂರುತ್ತಾರೆ, ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋದ್ರಾ ಘಟನೆಗೆ ರಾಜೀನಾಮೆ ನೀಡಿದ್ರಾ? ನಮ್ಮ ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ. ಆಪರೇಷನ್ ಕಮಲ ಮಾಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಅವರ ಪ್ರಯತ್ನ ವಿಫಲವಾಗಿದೆ. ಹಾಗಾಗಿ ಈಗ ಸುಳ್ಳು ಆರೋಪದ ಹಾದಿ ಹಿಡಿದಿದ್ದಾರೆ ಎಂದು ತಿಳಿಸಿದರು.

ಲೋಕಾಯುಕ್ತವನ್ನು ಮುಚ್ಚಲಾಗಿರಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ಅನೇಕ ರಾಜ್ಯಗಳಲ್ಲಿ ಇಂದಿಗೂ ಎಸಿಬಿ ಅಸ್ತಿತ್ವದಲ್ಲಿದೆ. ಬಿಜೆಪಿಯಲ್ಲಿ ಈ ದ್ವಂದ್ವ ಧೋರಣೆ ಏಕೆ? ರಾಜ್ಯ ಬಿಜೆಪಿಯಲ್ಲಿ ತಪ್ಪು ಮಾಡದಿರುವ, ಭ್ರಷ್ಟಾಚಾರ ಮಾಡದಿರುವ ಒಬ್ಬ ನಾಯಕನಾದರೂ ಇದ್ದಾನ? ಎಂದು ಪ್ರಶ್ನಿಸಿದರು.

ಕರ್ನಾಟಕದ ಬಿಜೆಪಿ-ಜೆಡಿಎಸ್ ಹಾಗೂ ರಾಜ್ಯಪಾಲರು ನಮ್ಮ ವಿರುದ್ಧ ಎಷ್ಟೇ ಕಿರುಕುಳ ನೀಡಿದರೂ ನಾವು ಬಡವರ ಪರವಾದ ಗ್ಯಾರಂಟಿ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ನನಗೆ ಬೆಂಬಲವನ್ನು ಸೂಚಿಸಿದ್ದಾರೆ. ನಮ್ಮ ಜೊತೆ ಜನರಿದ್ದಾರೆ, ಅವರಿಗಾಗಿ ನಮ್ಮ ಸರ್ಕಾರವಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular