ಒಳಮೀಸಲಾತಿ ಹಂಚಿಕೆ ಮಾಡುವಾಗ ಹೆಚ್ಚು ಹಿಂದುಳಿದ ಪರಿಶಿಷ್ಟ ಜಾತಿಯ ಒಳ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂದು ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ ಸರ್ಕಾರವನ್ನು ಒತ್ತಾಯಿಸಿದರು.
ಅಖಿಲ ಕರ್ನಾಟಕ ಹಂದಿಜೋಗಿಸ್ ಸಂಘ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಬಗ್ಗೆ ಚರ್ಚೆಯ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಜಾತಿಗೆ ಪ್ರಾತಿನಿಧ್ಯದ ಕೊರತೆ ಇದ್ದಲ್ಲಿ ಆ ಸಮುದಾಯ ಹಿಂದುಳಿದಿದೆ ಎಂದರ್ಥ. ಪರಿಶಿಷ್ಟ ಜಾತಿಯ ಒಳಗೇ ಅತಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ಜಾರಿಯಾದಲ್ಲಿ ಅತಿ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೀಸಲಾತಿಯು ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕವಾಗಿ ನ್ಯಾಯ ದೊರಕಿಸಬೇಕೆಂಬುದಾಗಿದ್ದು, ಪರಿಶಿಷ್ಟ ಜಾತಿಯಲ್ಲೇ ಅತಿ ಹಿಂದುಳಿದಿರುವ ಜಾತಿಗಳಿಗೆ ನ್ಯಾಯ ಒದಗಿಸಬೇಕಾಗಿರುವುದರಿಂದ ಒಳಮೀಸಲಾತಿ ಜಾರಿ ಅಗತ್ಯವಿದ್ದು, ರಾಜ್ಯ ಸರ್ಕಾರಗಳೇ ಒಳಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಬಂದಿದ್ದು, ಒಳಮೀಸಲಾತಿ ಜಾರಿಗಿದ್ದ ಅಡ್ಡಿ ಆತಂಕಗಳು ದೂರವಾಗಿವೆ ಎಂದು ಹೇಳಿದರು.
ಒಳಮೀಸಲಾತಿ ಜಾರಿ ಸಂದರ್ಭದಲ್ಲಿ ಜಾರಿ ಮಾಡಲು ಪರಿಶಿಷ್ಟ ಜಾತಿಯ ಸಮೀಕ್ಷೆಗೆ ಸರ್ಕಾರ ಸೂಚಿಸಿದಲ್ಲಿ ಜಾತಿಯ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿಯನ್ನು ವರ್ಗೀಕರಣ ಮಾಡುವುದರಿಂದ ಹಂದಿಜೋಗಿ ಜನಾಂಗದವರು ತಮ್ಮ ಜಾತಿಯನ್ನು ಹಂದಿಜೋಗಿ ಎಂದು ಬರೆಸಿದಾಗ ಜಾತಿಯ ನಿಖರ ಸಂಖ್ಯೆ ಗೊತ್ತಾಗಲಿದ್ದು, ಒಳಮೀಸಲಾತಿ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ನಮ್ಮ ಪಾಲಿನ ಒಳಮೀಸಲಾತಿ ಪಡೆಯಲು ನಾವೆ ಹೋರಾಟ ನಡೆಸಬೇಕು, ಅರಿವು ಮೂಡಿಸುವ ಅಗತ್ಯವಿದ್ದು, ಹಂದಿಜೋಗಿ ಜನಾಂಗವು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೀವ್ರ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಜನಾಂಗದ ಜನಸಂಖ್ಯೆಯ ಅಂಕಿ ಅಂಶಗಳ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಒಳಮೀಸಲಾತಿ ಜಾರಿಗೆ ನಡೆಯುವ ಗಣತಿ ಸಂದರ್ಭದಲ್ಲಿ ಹಂದಿಜೋಗಿ ಸಮಾಜದವರು ತಪ್ಪದೇ ಹಂದಿಜೋಗಿ ಎಂದು ಜಾತಿ ಕಾಲಂನಲ್ಲಿ ಬರೆಸಬೇಕೆಂದು ತಿಳಿಸಿದರು.
ಇತ್ತೀಚೆಗೆ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರು ಹೆಚ್ಚಿದ್ದು, ಸರ್ಕಾರವು ಜಾತಿ ಪ್ರಮಾಣ ನೀಡುವವರಿಗೆ ಸರ್ಕಾರ ತರಬೇತಿ ನೀಡುವುದು ಅಗತ್ಯವಿದೆ, ಆಗ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಹಂದಿಜೋಗಿಸ್ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ್, ಕಾರ್ಯಕಾರಿ ಮಂಡಳಿಯ ರಾಜು, ಜನಾಂಗದ ಮುಖಂಡರಾದ ಎಂ.ವಿ.ಗೋವಿಂದರಾಜು, ಪಿಳ್ಳಣ್ಣ, ಯಲ್ಲಪ್ಪ, ಶಿಕ್ಷಕ ಯಲ್ಲಯ್ಯ ಮುಂತಾದವರು ಹಾಜರಿದ್ದರು.