ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಕೊಡಮಾಡುವ ಟಿ.ಎಸ್.ರಾಮಚಂದ್ರರಾವ್(ಟಿಆರ್ ಎಸ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.
ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019 ರಿಂದ 2023ನೇ ಸಾಲಿನ ಒಟ್ಟು ಐದು ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯಲ್ಲಿ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ್ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅನುಮೋದಿಸಿ ಪ್ರಶಸ್ತಿಗಳನ್ನು ಘೋಷಿಸಿದೆ.
ಟಿ.ಎಸ್.ಆರ್ ಪತ್ರಿಕೋದ್ಯಮ ಪ್ರಶಸ್ತಿ 2019ನೇ ಸಾಲಿಗೆ ಶಿವಾಜಿ ಗಣೇಶನ್, 2020ನೇ ಸಾಲಿಗೆ ಶ್ರೀಕಾಂತಾಚಾರ್ಯ ಆರ್ ಮಣೂರ, 2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ, 2022ನೇ ಸಾಲಿಗೆ ಪದ್ಮರಾಜ ದಂಡವತಿ, 2023ನೇ ಸಾಲಿಗೆ ಡಾ.ಸರಜೂ ಕಾಟ್ಕರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ 2019ನೇ ಸಾಲಿಗೆ ರಾಜೀವ್ ಕಿದಿಯೂರು, 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021ನೇ ಸಾಲಿಗೆ ಎನ್.ಮಂಜುನಾಥ, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ ಅವರಿಗೆ ಪ್ರಶಸ್ತಿ ಲಭಿಸಿದೆ.


