ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ಹಿನ್ನೆಲೆಯಲ್ಲಿ ಚನ್ನೈ ಮತ್ತು ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಮಾದರಿಯಲ್ಲಿ ತುಮಕೂರು ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸದ್ಯದಲ್ಲಿಯೇ ಕೈಗಾರಿಕಾ ಹಬ್ ತಲೆ ಎತ್ತಲಿದೆ. ಇದರಿಂದ 5 ಲಕ್ಷ ಉದ್ಯೋಗ ಸೃಷ್ಠಿ ಗುರಿ ಹೊಂದಲಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ 46ನೇ ಬ್ಯಾಚ್‌ನ ಪ್ರಥಮ ವರ್ಷದ ಎಂಜಿನಿಯರ್‌ನಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಏಷ್ಯಾ ಖಂಡದಲ್ಲಿಯೇ ದೊಡ್ಡದಾದ ಕೈಗಾರಿಕಾ ಕೇಂದ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇನ್ನು ಹತ್ತು ವರ್ಷದಲ್ಲಿ ಕೈಗಾರಿಕೆಗಳು ಹೊಂದಿರುವ ತುಮಕೂರು ನೋಡಲು ಸಾಧ್ಯವಾಗುತ್ತದೆ. ಕೈಗಾರಿಕಾ ಹಬ್ ತಲೆ ಎತ್ತುವುದರಿಂದ ಸುಮಾರು 5 ಲಕ್ಷ ಪದವೀಧರರಿಗೆ ಉದ್ಯೋಗದ ಅವಕಾಶ ಸಿಗುತ್ತದೆ ಎಂದು ಹೇಳಿದರು.
ತುಮಕೂರು ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿ ಈಗಾಗಲೇ 150 ವಿವಿಧ ಕಂಪನಿಗಳಿದ್ದು, ಇನ್ನು 15ರಿಂದ 20 ಎಕರೆ ವಿಸ್ತರಣೆಯಾಗಲಿದೆ. ಸದ್ಯದಲ್ಲಿಯೆ ಜಪಾನಿಸ್ ಟೈನ್‌ಷಿಪ್ ನಿರ್ಮಾಣವಾಗಲಿದೆ. ಟಯೋಟಾ ಕಂಪನಿ ಕೂಡ ತಲೆ ಎತ್ತಲಿದೆ. ಎಚ್‌ಎಎಲ್ ಕಂಪನಿ ಕೆಲಸ ನಡೆಯುತ್ತಿದೆ ಎಂದರು.
ಇಂದಿನ ತಂತ್ರಜ್ಞಾನದ ದೃಷ್ಟಿಕೋನದಲ್ಲಿ ತಂತ್ರಜ್ಞಾನವು ಅಗತ್ಯವಿರುವ ಕೋರ್ಸ್ ಗಳಾದ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳನ್ನು ಅಳವಡಿಸಿಕೊಂಡಿದ್ದು ಉತ್ತಮ ಪದವೀಧರರನ್ನು ಕಾಲೇಜಿಗೆ ಮಾತ್ರ ಸೀಮಿತವಲ್ಲದೆ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ಶಿಕ್ಷಣ ಎಂಬುದು ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗೆಯೇ ಯಾವ ವಿದ್ಯಾರ್ಥಿ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೋ ಅವರು ಎಂದೂ ಪರೀಕ್ಷೆಗೆ ಭಯಪಡುವುದಿಲ್ಲ. ವಿದ್ಯಾರ್ಥಿಯಾದವನು ದೃಢವಾದ ಗುರಿಯನ್ನು ಇಟ್ಟುಕೊಳ್ಳವುದರ ಜೊತೆಗೆ ಅದನ್ನು ಸಾಧಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವುದು ಮುಖ್ಯವಾಗಿರುತ್ತದೆ ಎಂದು ಅವರು ನುಡಿದರು.
ಸಾಹೇ ವಿವಿಯ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಮಾತನಾಡಿ, ಮಕ್ಕಳ ಬಗ್ಗೆ ಅತಿಹೆಚ್ಚು ಕಾಳಜಿಯನ್ನು ಪೋಷಕರು ಇಟ್ಟುಕೊಳ್ಳಬೇಕು. ಅವರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಾಲೇಜು ಪ್ರಾಧ್ಯಾಪಕರೊಂದಿಗೆ ಸಂಪರ್ಕದಲ್ಲಿದ್ದು ನಿಗಾ ವಹಿಸುವುದನ್ನು ಮರೆಯಬೇಡಿ ಎಂದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು. ರಿಜಿಸ್ಟಾçರ್ ಡಾ.ಎಂ.ಝೆಡ್ ಕುರಿಯನ್, ಪರೀಕ್ಷಾಂಗ ನಿಯಂತ್ರಕ ಡಾ. ಜಿ. ಗುರುಶಂಕರ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರ ಡಾ.ವಿವೇಕ್ ವೀರಯ್ಯ, ಡೀನ್ ಡಾ.ರೇಣುಕಾಲತಾ ಇದ್ದರು.