ಗಿಡಮರ, ಪ್ರಾಣಿ, ಪಕ್ಷಿ, ಪ್ರಕೃತಿಯನ್ನು ಆರಾಧಿಸುವ, ಹಾಡಿ ಹೊಗಳುವ, ಆವುಗಳೊಂದಿಗೆ ಬದುಕುವ ವಿಶೇಷ ಸಂಸ್ಕೃತಿ ನಮ್ಮದು. ಈ ಎಲ್ಲವನ್ನೂ ಆರಾಧಿಸುವ ಗುಣ ಭಾರತೀಯರಲ್ಲಿದೆ ಎಂದು ಎಲೆರಾಂಪುರ ಕುಂಚಿಟಿಗರ ಮಠದ ಅಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಕೋಳಾಲ ಗ್ರಾಮ ಪಂಚಾಯ್ತಿ, ಮಾರುತಿ ಕಲಾ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಲಚಿಗೆರೆ ಸೌಬನ ಪ್ರಕಾಶನದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಉಮೇಶ್ ಎನ್ ಯಲಚಿಗೆರೆ ಆವರ ಸುಜನರ ಕೋಳಾಲ ಆದಿ-ಆಧುನಿಕ ಕೃತಿ ಲೋಕಾರ್ಪಣೆ ಮಾಡಿ ಸ್ವಾಮೀಜಿ ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ನಾವು ಕಲೆ, ಸಾಹಿತ್ಯ, ಪ್ರಕೃತಿಯನ್ನು ಆರಾಧಿಸುತ್ತಾ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡು ಬಂದಿದ್ದೇವೆ. ಕಲೆ, ಸಾಹಿತ್ಯಕ್ಕೆ ನಮ್ಮ ಸಮಾಜದಲ್ಲಿ ಉತ್ತಮ ಗೌರವವಿದೆ. ಸಾಹಿತಿಕಾರನಿಗೆ ಮನ್ನಣೆ ನೀಡುವ ಸಂಸ್ಕೃತಿ ನಮ್ಮದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭೆಗಳು ಹುಟ್ಟಿಕೊಂಡು ಬೆಳಕು ಕಾಣದೆ ಹೋಗುತ್ತವೆ. ಕಲೆ, ಸಾಹಿತ್ಯ, ಸಂಗೀತದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಇಂದು ಹಳ್ಳಿಗಳಲ್ಲಿ ಇದ್ದ ನಮ್ಮ ಮೂಲ ಸಂಸ್ಕೃತಿ, ಆಚರಣೆಗಳು ನಶಿಸುತ್ತಿವೆ, ಹಳ್ಳಿ ವಾತಾವರಣವೇ ಮರೆಯಾಗುತ್ತದೆ. ಇಂದು ಹಳ್ಳಿಗಳಲ್ಲಿ ವಯೋವೃದ್ಧರು ಮಾತ್ರ ಉಳಿದಿದ್ದಾರೆ, ಯುವ ಜನರು ಬದುಕು ಕಟ್ಟಿಕೊಳ್ಳಲು ಉದ್ಯೋಗ, ವ್ಯವಹಾರಕ್ಕಾಗಿ ನಗರಗಳಲ್ಲಿ ನೆಲೆಸಿದ್ದಾರೆ. ಈ ಬದಲಾವಣೆ ನಮ್ಮ ಸಾಂಸ್ಕೃತಿಕ ಬದುಕಿಗೆ ಧಕ್ಕೆ ತಂದಿದೆ ಎಂದು ಹೇಳಿದರು.
ನಮ್ಮ ಸಮುದಾಯದವರಿಗೆ ಎಲ್ಲ ರೀತಿಯ ಶಕ್ತಿ, ಸಾಮರ್ಥ್ಯವಿದ್ದರೂ ಸರ್ಕಾರದ ಮಟ್ಟದಲ್ಲಿ ಕೇವಲ ಸಣ್ಣಪುಟ್ಟ ಸಮಿತಿಗಳಲ್ಲಿ ಸದಸ್ಯರಾಗಿಯೋ, ನಿಗಮ ಮಂಡಳಿಗಳ ಸದಸ್ಯರಾಗಿಯೋ ಸೀಮಿತವಾಗುವಂತಹ ಪರಿಸ್ಥಿತಿ ಬಂದಿದೆ. ಪ್ರಶ್ನಿಸುವ, ಧ್ವನಿ ಮಾಡುವ ಶಕ್ತಿ ಬೆಳೆಸಿಕೊಳ್ಳದಿದ್ದರೆ ನಾವು ಅಷ್ಟಕ್ಕೇ ಸೀಮಿತವಾಗಿಬಿಡುತ್ತೇವೆ. ಧ್ವನಿ ಎತ್ತಬೇಕು, ಆವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉಪನ್ಯಾಸಕರಾದ ಡಾ.ರಾಮಲಿಂಗೇಶ್ವರ, ಡಾ.ಎ.ಓ.ನರಸಿಂಹಮೂರ್ತಿ ಕೃತಿ ಕುರಿತು ಮಾತನಾಡಿದರು. ಸುಜನರ ಕೋಳಾಲ ಆದಿ-ಆಧುನಿಕ ಕೃತಿಯ ಲೇಖಕ ಉಮೇಶ್ ಎನ್ ಯಲಚಿಗೆರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಖಜಾಂಚಿ ಎಂ.ಹೆಚ್.ನಾಗರಾಜು, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮೊದಲಾದವರು ಹಾಜರಿದ್ದರು.
ಕಲೆ, ಸಾಹಿತ್ಯಕ್ಕೆ ಸಮಾಜದಲ್ಲಿ ಉತ್ತಮ ಗೌರವ
RELATED ARTICLES