ದುಡುಕಿನಿಂದ ತೆಗೆದುಕೊಳ್ಳುವ ತೀರ್ಮಾನಗಳು ಭವಿಷ್ಯವನ್ನು ಅತಂತ್ರಕ್ಕೆ ತಳ್ಳುತ್ತವೆ. ಸಿಡುಕಿನ ಸ್ವಭಾವಗಳು ಆತ್ಮಹತ್ಯೆಯಂತಹ ಪ್ರಚೋದನೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಸಮಚಿತ್ತದಿಂದ ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಂಡಾಗ ಆತ್ಮಹತ್ಯೆ ಪ್ರಯತ್ನಗಳಿಂದ ಹೊರಬರಲು ಸಾಧ್ಯ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತಾ ಸಲಹೆ ನೀಡಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಅನನ್ಯ ಇನಿಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಅನನ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಲ ಮಾಡಿ ಅದನ್ನು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಹೇಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆಯೋ ಹಾಗೆಯೇ ವಿದ್ಯಾರ್ಥಿಗಳು ಕಡಿಮೆ ಅಂಕಗಳು ಬಂದಾಗ, ಪ್ರೀತಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ವಿದ್ಯಾರ್ಥಿ ಸಮೂಹ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಸೋಲೆ ಗೆಲುವಿನ ಹಾದಿ ಎಂಬುದನ್ನು ಮರೆಯಬಾರದು. ಜೀವನದಲ್ಲಿ ದುಡುಕುವ ಹಾಗೂ ಸಿಡುಕುವ ಸ್ವಭಾವಗಳನ್ನು ಬಿಡಬೇಕು. ಒಳ್ಳೆಯ ವಿಚಾರಗಳತ್ತ ಗಮನ ಹರಿಸಿ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆಗೆ ಮುಂದಾದಾಗ ಸಮಸ್ಯೆಗಳಿಂದ ಹೊರಬರಲು ಸಾಧ್ಯ ಎಂದರು.
ವಿಶೇಷ ಉಪನ್ಯಾಸ ನೀಡಿದ ಆಪ್ತ ಸಮಾಲೋಚಕ ಸಿ.ಸಿ.ಪಾವಟೆ ಮಾತನಾಡಿ, ನಮ್ಮಲ್ಲಿ ಬಹಳಷ್ಟು ಮಂದಿಗೆ ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ವಿದ್ಯಾರ್ಥಿಗಳಲ್ಲಿಯೂ ಇದೇ ಮನಸ್ಥಿತಿ ಇದೆ. ಇದರಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಬAಧಗಳು ಬಿರುಕು ಕಾಣಿಸಿಕೊಳ್ಳುತ್ತವೆ. ತಪ್ಪುಗಳನ್ನು ಒಪ್ಪಿಕೊಳ್ಳುವ, ತಿದ್ದಿ ನಡೆಯುವ ಕಡೆಗೆ ಗಮನ ಹರಿಸಿದಾಗ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯವಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ಆದರೆ ಆ ಪರಿಹಾರ ಕಂಡುಕೊಳ್ಳುವ ಮನಸ್ಸುಗಳು ಎಚ್ಚರವಾಗಿರಬೇಕು ಎಂದರು.
ಹದಿಹರೆಯದ ವಯಸ್ಸಿನಲ್ಲಿ ತಮ್ಮ ಮುಂದಿರುವ ಸಾಧನೆಯನ್ನು ಗುರಿಯಿಟ್ಟು ಪೂರೈಸಬೇಕೇ ಹೊರತು, ಬದುಕಿನ ನಿರ್ಧಾರಗಳನ್ನು ಕೈಗೊಳ್ಳಬಾರದು. ಕನಸು ಕಾಣುವುದಕ್ಕಿಂತ ಮುನ್ನ, ಆಸೆಪಡುವ ಮೊದಲು ನನಗೆ ಆ ಅರ್ಹತೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಚಿಂತಿಸುತ್ತಲೇ ತಮ್ಮ ಸಾಧನೆಯನ್ನು ಪೂರ್ಣಗೊಳಿಸಬೇಕು ಎಂದವರು ಕರೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಹಿಂದೆ ಆತ್ಮಹತ್ಯೆ ಪ್ರಕರಣಗಳು ಸೀಮಿತವಾಗಿದ್ದವು. ಕಾಲ ಬದಲಾದಂತೆ ಅದರ ವ್ಯಾಪ್ತಿ ವಿಸ್ತಾರವಾಗುತ್ತಿದೆ. ರೈತರು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವವರಿಗಿಂತ ಹೆಚ್ಚಾಗಿ ವಿದ್ಯಾರ್ಥಿ ಮತ್ತು ಯುವ ಜನತೆ ಹೆಚ್ಚು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಕಂಡುಕೊAಡು ತಡೆಯುವ ಪ್ರಯತ್ನಗಳು ಆಗಬೇಕು. ಪ್ರೌಢ ಹಂತದ ಹಾಗೂ ಪಿಯು ಹಂತದ ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ರೂಪಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕವೆ ವಿದ್ಯಾರ್ಥಿ ಸಮೂಹವನ್ನು ಸರಿದಾರಿಗೆ ತರಲು ಸಾಧ್ಯವಿದೆ ಎಂದರು.
ಮಹಿಳಾ ಇಲಾಖೆ ಮಿಷನ್ ಶಕ್ತಿ ಯೋಜನೆಯ ಕೋ ಆರ್ಡಿನೇಟರ್ ರಶ್ಮಿ ಮಾತನಾಡಿ, ಮನಸ್ಸು ನಿಗ್ರಹ ಮಾಡಿಕೊಳ್ಳುವ ಶಕ್ತಿಯನ್ನು ಯಾರು ರೂಪಿಸಿಕೊಳ್ಳುವರೋ ಅವರ ಭವಿಷ್ಯ ಉಜ್ವಲವಾಗುತ್ತದೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ತಾವು ತಪ್ಪು ದಾರಿಗೆ ಹೋಗುತ್ತಾ ಪೋಷಕರನ್ನೂ ಸಿಲುಕಿಸುತ್ತಾರೆ. ಇದರಿಂದಾಗಿ ಇಡೀ ಕುಟುಂಬ ಸಮಸ್ಯೆಗಳಿಗೆ ಒಳಗಾಗುವ ಪ್ರಸಂಗಗಳನ್ನು ನಾವು ಕಾಣುತಿದ್ದೇವೆ ಎಂದು ಉದಾಹರಿಸಿದರು.
ಅನನ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಅನನ್ಯ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಘು, ವರದಕ್ಷಿಣೆ ವಿರೋಧಿ ವೇದಿಕೆಯ ಸಿ.ಎಲ್.ಸುನಂದಮ್ಮ, ಗಂಗಲಕ್ಷಿö್ಮ, ಸಾಂತ್ವನ ಕೇಂದ್ರದ ಪಾರ್ವತಮ್ಮ, ಯುವರಾಣಿ ಮತ್ತಿತರರು ಹಾಜರಿದ್ದರು. ಉಪನ್ಯಾಸಕಿ ರಾಧಾಮಣಿ ಸ್ವಾಗತಿಸಿ, ಸುಮ ವಂದಿಸಿದರು. ಶ್ವೇತ ಕಾರ್ಯಕ್ರಮ ನಿರೂಪಿಸಿದರು.