ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಕರಿ ಮಾಲಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮರೆಯುವ ಮುನ್ನವೇ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಅದೇ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ.
ಮೃತ ರಾಮಸ್ವಾಮಿ ಗ್ರಾಮದ ಯೋಗೀಶ್ ಎಂಬುವರ ಬಳಿ ಸಾಲವನ್ನು ಪಡೆದಿದ್ದರು. ಅಲ್ಲದೆ ಮೂರು ವರ್ಷಗಳ ಕಾಲ ಶೇ10ರಂತೆ ಬಡ್ಡಿಯನ್ನು ಕಟ್ಟಿದ್ದರು ಎನ್ನಲಾಗಿದೆ. ಆದರೂ ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹಣಕ್ಕಾಗಿ ಒತ್ತಡ ಹೆಚ್ಚಿದ್ದರಿಂದ ಬಡ್ಡಿ ಹಣವನ್ನು ಕಟ್ಟಲಾಗದೆ, ವ್ಯವಹಾರವನ್ನೂ ಸರಿಯಾಗಿ ನಡೆಸಲಾಗದೆ ಮನನೊಂದಿದ್ದ ರಾಮಸ್ವಾಮಿ, ಮಂಗಳವಾರ ಮಧ್ಯಾಹ್ನ ಮನೆಗೆ ಬಂದು ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಬಂದು ಸುಮಾರು ಬಾಗಿಲು ಬಡಿದಾಗ ಎಷ್ಟು ಹೊತ್ತಾದರೂ ಬಾಗಿಲನ್ನು ತೆರೆಯದಿರುವ ಕಾರಣ ಅನುಮಾನಗೊಂಡ ಮೃತರ ಪತ್ನಿ ಕೂಗಾಟ ನಡೆಸಿದ್ದಾರೆ. ಅಕ್ಕಪಕ್ಕದವರು ಬಂದು ಬಾಗಿಲನ್ನು ಒಡೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.
ಮೀಟರ್ ಬಡ್ಡಿಗಾಗಿ ಒತ್ತಾಯಿಸಿದ್ದರಿಂದಲೇ ಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀಟರ್ ಬಡ್ಡಿಗಾಗಿ ಒತ್ತಾಯಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ಪತ್ನಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.