Thursday, October 10, 2024
Google search engine
Homeಜಿಲ್ಲೆಪೊದೆಯಲ್ಲಿ ರಸ್ತೆಯೋ, ರಸ್ತೆಯಲ್ಲಿ ಪೊದೆಯೋ...

ಪೊದೆಯಲ್ಲಿ ರಸ್ತೆಯೋ, ರಸ್ತೆಯಲ್ಲಿ ಪೊದೆಯೋ…

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರಸ್ತೆ ಭಾಗ್ಯ ದೊರೆಯದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಪಟ್ಟಣಕ್ಕೆ ಹೊಂದಿಕೊಡಿರುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮಗಳು ಶಾಪಗ್ರಸ್ತವಾಗಿವೆ. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಇಂತಹ ಗ್ರಾಮಗಳು ಅಭಿವೃದ್ಧಿ ಕಂಡಿಲ್ಲ.

ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಗ್ರಾಮದಲ್ಲಿ ಓಡಾಡುವುದಕ್ಕೆ ರಸ್ತೆ ಸೌಕರ್ಯವೇ ಇಲ್ಲದೆ ಜನ ಬೇಸತ್ತು ಹೋಗಿದ್ದಾರೆ. ಸಂಚರಿಸಲು ಸರಿಯಾದ ರಸ್ತೆ ಇಲ್ಲದೆ ಜನರು ಪರದಾಡುವುದು ಇಲ್ಲಿ ಸಾಮಾನ್ಯವಾಗಿದೆ. ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯ್ತಿಯ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯದ ಜನ ರಸ್ತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲಿ ಗ್ರಾಮಗಳು ರಸ್ತೆ ಅಭಿವೃದ್ಧಿ ಕಾಣದೆ ಇರುವುದು ದುರಂತ ಸಂಗತಿ.

ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ಈ ಎರಡು ಗ್ರಾಮದಲ್ಲಿ ಸುಮಾರು 90 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಸರ್ಕಾರ ಮಾಡುವುದಾಗಿ ಜನಪ್ರತಿನಿಧಿಗಳು ಭಾಷಣ ಬಿಗಿಯುತ್ತಲೆ ಇರುತ್ತಾರೆ. ಆದರೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಇಂದಿಗೂ ಈ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳ ಇಲ್ಲವಾಗಿದೆ.

ಇಲ್ಲಿನ ಜನರಿಗೆ ಸಂಚರಿಸಲು ಸರಿಯಾದ ರಸ್ತೆಯಿಲ್ಲ. ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರು ದವಾಖಾನೆಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಬಂದರೆ ಕೆಸರುಮಯವಾಗುವ ದೊಡ್ಡೇಗೌಡನಪಾಳ್ಯ ಹಾಗೂ ಬಡಮುದ್ದನಪಾಳ್ಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಇಂತಹ ರಸ್ತೆಯಲ್ಲೇ ಜನರು ಎದ್ದು ಬಿದ್ದು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೊರಟರೆ ರೈತರು ರಸ್ತೆಯಲ್ಲಿ ನಡೆಯಲಾಗದೆ ಜಮೀನು ಬದುಗಳ ಮೇಲೆ ಹೋಗುತ್ತಿದ್ದಾರೆ.

ಸ್ಥಳೀಯ ಶಾಸಕರಿಗೆ ಜನರ ಮತ ಬೇಕೇ ಹೊರತು ಅಭಿವೃದ್ಧಿ ಬೇಕಿಲ್ಲ ಎಂಬುದನ್ನು ಈ ಹಳ್ಳಿಗಳ ಜನರು ಹೇಳುತ್ತಿದ್ದಾರೆ. ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರೆಲ್ಲ ನಾಲ್ಕೆöÊದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನವಿ ಎಲ್ಲಾ ಮನೆಯಿಂದ ಆಚೆಗೆ ಎಂಬಂತಹ ಸ್ವಭಾವ ರೂಢಿಗತವಾದಂತಿದೆ.

ತೋವಿನಕೆರೆ ಗ್ರಾಮ ಪಂಚಾಯ್ತಿ ತೆರಿಗೆ ಮಾತ್ರ ಕಾಲಕಾಲಕ್ಕೆ ವಸೂಲಿ ಮಾಡುತ್ತಿದೆ. ಆದರೆ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆ ತೆರಿಗೆ ಹಣ ಬಳಕೆಯಾಗುತ್ತಿಲ್ಲ. ಗ್ರಾಮ ಪಂಚಾಯ್ತಿ ಆಡಳಿತ ಯಂತ್ರವಂತೂ ಕೆಟ್ಟು ಹೋಗಿದೆ. ಗ್ರಾಮಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸದಿದ್ದ ಮೇಲೆ ಇಲ್ಲಿಗೆ ಗ್ರಾಪಂ ಅವಶ್ಯಕವೇನಿದೆ ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಸಚಿವರಾಗಲೀ, ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕೂಡಲೇ ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಬೇಕು, ಇಲ್ಲದಿದ್ದರೆ ಈ ಎರಡೂ ಗ್ರಾಮಗಳ ಗ್ರಾಮಸ್ಥರು ರಸ್ತೆ ದುರಸ್ಥಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular