ರಾಜ್ಯಪಾಲರ ಮೂಲಕ ಬಹುಮತದ ಸರ್ಕಾರವನ್ನು ಬಿಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತಿದ್ದು, ಇದನ್ನು ವಿರೋಧಿಸಿ ಸೆ.14ರಂದು ಒಕ್ಕೂಟ ಉಳಿಸಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಒಕ್ಕೂಟ ಸರ್ಕಾರ ವಿರೋಧ ಪಕ್ಷಗಳೇ ಇಲ್ಲದಂತಹ ಸ್ಥಿತಿ ನಿರ್ಮಾಣ ಮಾಡಲು ಹೊರಟಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಜವಾಬ್ದಾರಿ ವಿರೋಧಪಕ್ಷಗಳಿಗೂ ಇದೆ. ಆದರೆ ಬಿಜೆಪಿ ಪಕ್ಷ, ಆರ್.ಎಸ್.ಎಸ್. ಮತ್ತು ವಿ.ಹೆಚ್.ಪಿ ಅಜೆಂಡಾಗಳನ್ನು ಜಾರಿಗೆ ತರಲು ಇನ್ನಿಲ್ಲದ ತಂತ್ರ, ಕುತಂತ್ರಗಳನ್ನು ಮಾಡುತ್ತಿದೆ ಎಂದು ದೂರಿದರು.
ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.ಇದನ್ನು ತಡೆಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಶಪಿಸಲಿದೆ. ಹಾಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ತಡೆಯುವ ಪ್ರಯತ್ನವನ್ನು ಸಮಾನ ಮನಸ್ಕ ಸಾಹಿತಿಗಳು,ಕಲಾವಿದರು, ಹೋರಾಟಗಾರರು, ದಲಿತರು, ಪ್ರಗತಿಪರರ ಒಗ್ಗೂಡಿ ಈ ರಾಷ್ಟ್ರೀಯ ಆಂದೋಲನವನ್ನು ರೂಪಿಸುತಿದ್ದು, ಇದರಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಭಾರತ ಗಣತಂತ್ರ ವ್ಯವಸ್ಥೆ ರೂಪಿಸಿಕೊಂಡಿರುವ ದೇಶ. ಇಲ್ಲಿ ಒಂದೇ ಸಮುದಾಯ, ಧರ್ಮ, ಜಾತಿ, ಭಾಷೆಗಳಿಲ್ಲ. ಬಹುತ್ವ ಎಲ್ಲೆಡೆ ಇದೆ. ಆದರೆ ಕಳೆದ 10 ವರ್ಷಗಳಲ್ಲಿ ಏಕ ಭಾಷೆ, ಏಕ ಸಂಸ್ಕೃತಿ, ಧರ್ಮ ಎಂಬ ಅಮಲಿನಲ್ಲಿ ಇಡೀ ದೇಶವನ್ನು ಒಡೆದು ಆಳುವ ಕೆಲಸ ಮಾಡಲಾಗುತ್ತಿದೆ. ಇದು ಮತ್ತೊಂದು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ.ಇದರ ವಿರುದ್ದ ವ್ಯವಸ್ಥಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಈ ಆಂದೋಲನ ರೂಪಿಸಲಾಗಿದೆ. ಸೆಪ್ಟಂಬರ್ 14ರ ನಂತರ ರಾಜ್ಯದ ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನರಲ್ಲಿ ಒಕ್ಕೂಟ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಸೆಪ್ಟಂಬರ್ 14ರಂದು ಬೆಂಗಳೂರಿನ ಕೆ.ಆರ್.ಸರ್ಕಲ್‌ನಲ್ಲಿರುವ ಯುವಿಸಿಇ ಅಲುಮಿನಿ ಹಾಲ್‌ನಲ್ಲಿ ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಾದೀಶ ಗೋಪಾಲಗೌಡ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಸೆಪ್ಟಂಬರ್ 3ನೇ ವಾರದಲ್ಲಿ ದೆಹಲಿಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದರು
ಚಿಂತಕ ನಟರಾಜ್ ಬೂದಾಳ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳಿಗೆ ತನ್ನದೇ ಆದ ಘನತೆಯಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ವಿರೋಧಿಗಳ ದ್ವನಿ ಅಡಗಿಸುವ ಕೆಲಸವನ್ನು ವ್ಯವಸ್ಥಿತವಾಗಿ ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಮೂಲಕ ಮಾಡಲಾಗುತ್ತಿದೆ. ಸಣ್ಣಪುಟ್ಟ, ವಯುಕ್ತಿಕ ತಪ್ಪುಗಳಿಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವರನ್ನು ಜೈಲಿಗೆ ಕಳುಹಿಸಲಾಗಿದೆ. ವಿಚಾರಣೆಯೇ ಇಲ್ಲದೆ, ಸಾಹಿತಿಗಳು, ಹೋರಾಟಗಾರರು, ಬುದ್ದಿಜೀವಿಗಳನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಹಾಗಾಗಿ ಇದರ ವಿರುದ್ದು ಹೋರಾಟಕ್ಕೆ ಇಳಿದಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ಡಾ.ವೈ.ಕೆ.ಬಾಲಕೃಷ್ಣ, ನರಸಿಯಪ್ಪ, ಸಿ.ಕೆ.ಉಮಾಪತಿ, ನಟರಾಜ ಹೊನ್ನವಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.