ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪರಸ್ಪರ ಏಕವಚನದಲ್ಲೇ ಅವಾಚ್ಯಶಬ್ದಗಳಿಂದ ನಿಂದಿಸಿಕೊಂಡ ಬೆನ್ನಲ್ಲೇ ಉಭಯ ನಾಯಕರ ಬೆಂಬಲಿಗರು ಕೂಡ ಆರೋಪ-ಪ್ರತ್ಯಾರೋದಲ್ಲಿ ತೊಡಗಿದ್ದಾರೆ. ಯಾರಿಗೇನೂ ಕಡಿಮೆ ಇಲ್ಲ ಎಂಬಂತೆ ಭಿನ್ನ ಪಟ್ಟುಗಳನ್ನು ಹಾಕಿದ್ದಾರೆ.
ಮೊದಲಿನಿಂದಲೂ ಶಾಸಕ ಶ್ರೀನಿವಾಸ್ ಮತ್ತು ಸಂಸದ ಜಿ.ಎಸ್.ಬಸವರಾಜು ನಡುವೆ ಆಗೊಮ್ಮೆ-ಈಗೊಮ್ಮೆ ವಾಗ್ವಾದಗಳು ನಡೆಯುತ್ತಲೇ ಬರುತ್ತಿದೆ. ಇದು ಈಗ ತಾರಕಕ್ಕೇರಿದೆ. ಬಸವರಾಜು ಬೆಂಬಲಿಗರು ಮಾಧ್ಯಮಗಳೊಂದಿಗೆ ಮಾತನಾಡಿ, ಶಾಸಕ ಶ್ರೀನಿವಾಸ್ ಅಭಿವೃದ್ಧಿ ಮರೆತು ಇಸ್ಪೀಟ್ ಆಟದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.
ಅಷ್ಟೇ ಅಲ್ಲ ಜೆಡಿಎಸ್ ತೊರೆಯುವ ಸುದ್ದಿಗಳು ಹರಡಿವೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಲು ಶ್ರೀನಿವಾಸ್ ಈ ರೀತಿ ಸುದ್ದಿಯಲ್ಲಿದ್ದಾರೆ. ಕೇವಲ ಪ್ರಚಾರಕ್ಕಾಗಿ ಇಂತಹ ಗಿಮಿಕ್ ಮಾಡಿದ್ದಾರೆ’ ಎಂದು ಆರೋಪಿಸಿದರು. ಜಿ.ಎಸ್. ಬಸವರಾಜು ಹೇಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹೇಮಾವತಿ ನಾಲಾ ಅಗಲೀಕರಣ ಯೋಜನೆಗೆ ಹಣ ತಂದರು ಎಂಬ ಬಗ್ಗೆ ವಿವರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಎಸ್.ಆರ್.ಶ್ರೀನಿವಾಸ್ ಗುಬ್ಬಿ ಎಂ.ಎಲ್ಎ ಫ್ಯಾನ್ಸ್ ಎಂಬ ಫೇಸ್ ಬುಕ್ ಖಾತೆಯಲ್ಲಿ ಸಂಸದ ಜಿ.ಎಸ್. ಬಸವರಾಜು ಫೋಟೋಕ್ಕೆ ಹೂವಿನ ಹಾರ ಹಾಕಿ ‘ತುಮಕೂರಿನ ಜನರ ಪಾಲಿಗೆ ಸತ್ತುಹೋಗಿರುವ ಅಯೋಗ್ಯ ಸಂಸದ ಬಸವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ, ಶಾಂತಿ’ ಎಂಬ ಹೇಳಿಕೆ ಹಾಕಿ ಸಿಟ್ಟು ಹೊರಹಾಕಿದ್ದಾರೆ.
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ದಿನಕ್ಕೂ ಮೊದಲು ಇಬ್ಬರು ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರು ಅತ್ಯಂತ ತುಚ್ಚ ಮಟ್ಟಕ್ಕೆ ಇಳಿದು ಕೆಸರು ಎರೆಚಾಟದಲ್ಲಿ ತೊಡಗಿರುವುದಕ್ಕೆ ನಾಗರಿಕರಿಂದ ಬೇಸರ ವ್ಯಕ್ತವಾಗಿದೆ. ಜನಪ್ರತಿನಿಧಿಗಳು ಜನರಿಗೆ ಬುದ್ದಿ ಹೇಳಬೇಕು. ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ಕೊಡಬೇಕು. ಅದು ಬಿಟ್ಟು ಜವಾಬ್ದಾರಿಯನ್ನೇ ಮರೆತು ಜಗಳ ಮಾಡಿಕೊಳ್ಳುತ್ತಿರುವುದು ಮತ್ತು ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.