ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಮೇಲೆ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ಮೂಲ ಬಿಜೆಪಿಗರು ಮತ್ತು ಯಡಿಯೂರಪ್ಪನವರ ವಿರೋಧಿ ಗುಂಪು ಇಂದಿಗೂ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೆಂದು, ಆರ್.ಅಶೋಕ್ ಅವರನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೆಂದು ಒಪ್ಪಲು ತಯಾರಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿ ಪಕ್ಷದಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ. ಪಕ್ಷದಲ್ಲಿನ ಗುಂಪುಗಾರಿಕೆಯನ್ನು ನಿಭಾಯಿಸಲು ವಿಫಲರಾಗಿ ಕೈಚೆಲ್ಲಿರುವ ಅಧ್ಯಕ್ಷ ವಿಜಯೇಂದ್ರ ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕೋಟಿ ನಲವತ್ತು ಲಕ್ಷ ಮತಗಳನ್ನು ಪಡೆದಿರುವ ಬಿಜೆಪಿ, ಒಂದೂವರೆ ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ. ಬಿಜೆಪಿ ಬಾಲಭವನದ ನಾಯಕ ವಿಜಯೇಂದ್ರ ಅವರು, ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಇಂತಹ ಘೋಷಣೆಗಳ ಮೂಲಕ ತಮ್ಮ ನಾಯಕತ್ವವನ್ನ ಸಾಬೀತುಪಡಿಸಿಕೊಳ್ಳು ಹೆಣಗುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಪೂರೈಸುವಲ್ಲಿ ವಿಫಲಗೊಂಡಿದೆ. ನಮ್ಮ ದೇಶದ ಹಸಿವಿನ ಸೂಚ್ಯಂಕ ಮೋದಿ ನಾಯಕತ್ವದಲ್ಲಿ ದಿನೇ ದಿನೇ ಮೇಲಕ್ಕೆ ಏರುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ತಪ್ಪು ನಿರ್ಧಾರಗಳಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಪ್ರಚಾರ ಪಡೆದುದನ್ನು ಹೊರತುಪಡಿಸಿ ಯಾವುದೇ ನಗರ ಪ್ರದೇಶ ನಿಗದಿತ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿರುವುದಿಲ್ಲ. ಆದರೆ ಮಕ್ಕಳ ಸಾವಿನ ಹೆಸರಿನಲ್ಲೂ ಪೊರಕೆ ಹಿಡಿದು ಬಿಜೆಪಿ ಸರ್ಕಾರ ಪ್ರಚಾರ ಗಿಟ್ಟಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಬಿ.ಎಲ್.ಸಂತೋಷ್ ಅವರ ಮಾರ್ಗದರ್ಶನದಲ್ಲಿ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಬಸವರಾಜ್ ಪಾಟೀಲ್ ಯತ್ನಾಳ್, ಸದಾನಂದಗೌಡ, ಅರವಿಂದ ಬೆಲ್ಲದ್, ಸಿ.ಟಿ.ರವಿ, ರವಿಕುಮಾರ್, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಮುಂತಾದವರು ಜಗನ್ನಾಥ ಭವನದ ತಂಡವಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಇತ್ತೀಚೆಗೆ ವಿರೋಧ ಪಕ್ಷದ ನಾಯಕರಾಗಿ ಪದೋನ್ನತಿ ಪಡೆದಿರುವ ಛಲವಾದಿ ನಾರಾಯಣಸ್ವಾಮಿ, ಡಾ.ಅಶ್ವಥ್ ನಾರಾಯಣ್, ಡಾ.ಸುಧಾಕರ್, ಪ್ರೀತಮ್ ಗೌಡ ಮುಂತಾದವರು ಬಾಲಭವನದ ತಂಡವೆಂದು ಜಗನ್ನಾಥ ಭವನದ ತಂಡ ಕರೆಯುತ್ತಿದೆ. ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಇನ್ನೊಂದು ಗುಂಪು ಎರಡೂ ಗುಂಪುಗಳಿಂದ ಅಂತರ ಕಾಯ್ದುಕೊಂಡು ಮೂರನೇ ಗುಂಪು ಸೃಷ್ಠಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ದೇಶದಲ್ಲಿ ಕೇಂದ್ರದ ಮೋದಿ ಸರ್ಕಾರ ಅಲ್ಪಸಂಖ್ಯಾಥರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿರುವುದು ಸತ್ಯವಾಗಿದ್ದು ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮುಸ್ಲೀಂ ಸಮುದಾಯದ ಅಭಿವೃಧ್ಧಿಗಾಗಿ ಜಸ್ಟಿಸ್ ಸಾಚಾರ್ ಸಮಿತಿಯ ವರದಿಯನ್ನು ಜಾರಿಗೊಳಿಸುವ ಕುರಿತು ಚಕಾರ ಎತ್ತುತ್ತಿಲ್ಲ. ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಸುಭದ್ರತೆಯನ್ನು ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷವಾಗಿದ್ದು, ಬಿಜೆಪಿಯಿಂದ ಅಲ್ಪಸಂಖ್ಯಾತರ ಕುರಿತು ಪಾಠ ಹೇಳಿಸಿಕೊಳ್ಳುವ ಸರ್ಕಾರ ಇರುವುದಿಲ್ಲ. ಬಿಜೆಪಿ ನಾಯಕರನ್ನು ತೃಪ್ತಿಗೊಳಿಸಲು ಸ್ವಾಭಿಮಾನವನ್ನು ಕೈಬಿಟ್ಟು ಚಡ್ಡಿಯನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರತಿಭಟನೆ ನಡೆಸಿದ ಛಲವಾದಿ ನಾರಾಯಣಸ್ವಾಮಿ ಅವರು ದಾರಿ ತಪ್ಪದೇ ಇದ್ದರೆ ಸಾಕು ಎಂದು ರಮೇಶ್ ಬಾಬು ವ್ಯಂಗ್ಯ ಮಾಡಿದ್ದಾರೆ.