Sunday, October 25, 2026
Google search engine
Homeಆರ್ಥಿಕತುಮಕೂರನ್ನು ಪ್ರತಿಷ್ಠಿತ ಜಿಲ್ಲೆಯಾಗಿ ಬೆಳೆಸಲು ಬದ್ಧ-ಡಾ.ಜಿ.ಪರಮೇಶ್ವರ್ ಆಶಯ

ತುಮಕೂರನ್ನು ಪ್ರತಿಷ್ಠಿತ ಜಿಲ್ಲೆಯಾಗಿ ಬೆಳೆಸಲು ಬದ್ಧ-ಡಾ.ಜಿ.ಪರಮೇಶ್ವರ್ ಆಶಯ

ನಾನು ಚಿಕ್ಕವನಿದ್ದಾಗ ನನ್ನ ತಣದೆ ಸಿದ್ದಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಶ್ರೀಗಳ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಭಾನುವಾರ ತುಮಕೂರು ನಗರದ ಆರ್.ಟಿ.ಸಿ. ಕನ್ವೆನ್ಸನ್ ಹಾಲ್‌ನಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಡಾ.ಜಿ.ಪರಮೇಶ್ವರ್, ‘ಸಿರಿಧಾನ್ಯ ಸಂಪದ’ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು.ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ನನ್ನ ಆಶಯವಾಗಿದೆ. ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ನನ್ನಿಂದಾದ ಕೊಡುಗೆ ನೀಡಲು ಪ್ರಯತ್ನಿಸಿರುವುದಾಗಿ ತಿಳಿಸಿದರು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿರುವುದನ್ನು ಡಿಸಿಎಂ ಜಿ.ಪರಮೇಶ್ವರ್ ಸ್ಮರಿಸಿದರು.

ತುಮಕೂರನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್‌ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ. ಈ ಯೋಜನೆಯಡಿ ಇನ್ನಷ್ಟು ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಲು ಕಾಲಾವಕಾಶ ಬೇಕಾಗಿದ್ದು, ಅಗತ್ಯ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದರು.

ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು 500 ರಿಂದ 1 ಸಾವಿರ ಎಕರೆವರೆಗೆ ಭೂಮಿ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಉದ್ಯಮಿಯೊಬ್ಬರು ಗ್ರೀನ್ ಹೈಡೋಜನ್‌ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು 80,000 ಕೋಟಿ ರೂ.ಹೂಡಿಕೆ ಮಾಡುವ ಉದ್ದೇಶದೊಂದಿಗೆ 2 ಸಾವಿರ ಎಕರೆ ಭೂಮಿ ಒದಗಿಸುವಂತೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ, ಉಪಾಧ್ಯಕ್ಷ ಸಿ.ಎಸ್. ನಂಜುಂಡಪ್ಪ, ಟಿಜಿಎಂಸಿ ಬ್ಯಾಂಕ್‌ ಅಧ್ಯಕ್ಷ ಹೆಚ್.ಎಂ.ದಿವ್ಯಾನಂದಮೂರ್ತಿ, ಜಿಎಂಎ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ರವಿಕುಮಾರ್, ಎಂ.ಬಾಲಾಜಿ, ಸಂಘದ ಕಾರ್ಯದರ್ಶಿ ಕೆ.ವಿ. ಬೆಟ್ಟಯ್ಯ, ಜಂಟಿ ಕಾರ್ಯದರ್ಶಿ ಆರ್. ನಾಗಪ್ರಕಾಶ್, ಖಜಾಂಚಿ ನಟರಾಜ್‌ಐವಾರ್, ನಿರ್ದೇಶಕರಾದ ಜಿ.ಹೆಚ್. ಪರಮಶಿವಯ್ಯ, ಟಿ.ಎಂ.ಚನ್ನಪ್ಪ, ಎ.ಆರ್. ಶ್ರೀನಾಥ್, ಹೆಚ್.ಎಸ್. ಸುರೇಶ್‌ಕುಮಾರ್, ಟಿ.ಹೆಚ್. ಪ್ರಸನ್ನಕುಮಾರ್, ಜಿ.ಸಿ.ಬಸವರಾಜು, ಜಿ.ಎಸ್. ಅರುಣಾಚಲಂ, ಎಂ.ಜಿ.ನಾಗೇಂದ್ರ, ಆರ್.ಎನ್. ಜ್ವಾಲನಪ್ಪ, ಸಿ.ಸರವಣನ್, ವ್ಯವಸ್ಥಾಪಕ ಸಿ.ಎನ್. ಉದಯ್‌ಕುಮಾರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular