ಮೀಟರ್ ಬಡ್ಡಿ ದಂಧೆಗೆ ಹೆದರಿಕೊಂಡು ಬೇಕರಿ ಮಾಲಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾತನನ್ನು ಹಾಸನ ಮೂಲದ 45 ವರ್ಷದ ಬಸವರಾಜು ಎಂದು ಗುರುತಿಸಲಾಗಿದೆ.
ಪಟ್ಟಣದ ಹೊರವಲಯದ ಸಿಐಟಿ ಕಾಲೇಜಿನ ಮುಂಭಾಗ ಬೇಕರಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಬಸವರಾಜು ಸ್ಥಳೀಯ ವ್ಯಕ್ತಿಗಳಿಂದ ಸಾಲ ಪಡೆದಿದ್ದ ಎನ್ನಲಾಗಿದೆ.
ಹಾಸನದ ಮೂಲದವರಾಗಿದ್ದ ಬಸವರಾಜು ಹಲವು ವರ್ಷಗಳಿಂದ ಬೇಕರಿ ಇಟ್ಟುಕೊಂಡು ಕುಟುಂಬದೊಂದಿಗೆ ವಾಸವಿದ್ದರು.
ಸ್ಥಳೀಯ ನಾಗರಾಜು ಉರೂಫ್ ಬಡ್ಡಿ ನಾಗ ಎಂಬುವರಿಂದ ಪಡೆದಿದ್ದ ಸಾಲವನ್ನು ಹಿಂದಿರುಗಿಸಿದ್ದರೂ, ಬಡ್ಡಿ ನಾಗನಿಗೆ ನೀಡಿದ ಚೆಕ್ ಹಿಂದಿರುಗಿಸದೆ ಮತ್ತಷ್ಟು ಹಣಕ್ಕಾಗಿ ಪೀಡಿಸಿ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಮೃತ ರಾಜು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತರ ಪತ್ನಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಬಡ್ಡಿ ನಾಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.