Thursday, November 21, 2024
Google search engine
Homeಮುಖಪುಟರೈತರು, ಶಿಕ್ಷಕರು, ಸೈನಿಕರು ದೇಶದ ನಿರ್ಮಾತೃಗಳು- ಸಿಎಂ ಸಿದ್ದರಾಮಯ್ಯ

ರೈತರು, ಶಿಕ್ಷಕರು, ಸೈನಿಕರು ದೇಶದ ನಿರ್ಮಾತೃಗಳು- ಸಿಎಂ ಸಿದ್ದರಾಮಯ್ಯ

ದೇಶದ ಎರಡನೇ ರಾಷ್ಟ್ರಪತಿಗಳಾಗಿದ್ದ ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಲು ಸಾಧ್ಯವಾಗಿದೆ ಅಂದರೆ, ಇದೇ ಸಾಧ್ಯತೆ ಎಲ್ಲಾ ಶಿಕ್ಷಕರಿಗೂ ಇದ್ದೇ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರೂ ರಾಧಾಕೃಷ್ಣನ್ ಅವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು.

ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು ರೂಪಿಸುವವರು ನಮ್ಮ ಶಿಕ್ಷಕರು. ಇದು ಶಿಕ್ಷಕರ ಮೂಲಭೂತ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಅತಿ ಹೆಚ್ಚಾಗಿದ್ದಾರೆ. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.

ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವಂತೆ ರೂಪಿಸುವುದೇ ಶಿಕ್ಷಕರ ಜವಾಬ್ದಾರಿ. ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಮಾತ್ರ ಅವರಿಗೆ ಸಮಾಜ ಅರ್ಥ ಆಗುತ್ತದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಾರೆ.

ವಿಜ್ಞಾನ ಓದಿರುವ ವಿದ್ಯಾರ್ಥಿಗಳೂ ಮೌಡ್ಯಕ್ಕೆ ಜೋತು ಬೀಳುವುದು, ಜಾತಿ ತಾರತಮ್ಯ ಮಾಡುವುದಾದರೆ ಅವರಿಗೆ ಸಿಕ್ಕ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣದ್ದಾಗಿದೆ ಎಂದು ತಿಳಿಸಿದರು.

ಎಲ್ಲರಿಗೂ ಶಿಕ್ಷಣ ದೊರಕದಂತೆ ತಡೆಯುತ್ತಿದ್ದ ಕಾಲ ಈಗ ಇಲ್ಲ. ಈಗ ಪ್ರತಿಯೊಬ್ಬರಿಗೂ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಕಡ್ಡಾಯ ಶಿಕ್ಷಣದ ಜೊತೆಗೆ ಅತ್ಯುತ್ತಮ ವ್ಯಕ್ತಿತ್ವಗಳನ್ನು ರೂಪಿಸುವ ರೂವಾರಿಗಳು ನಮ್ಮ ಶಿಕ್ಷಕರು ಎಂದರು.

ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಕರಿಂದ, ಶಿಕ್ಷಣದಿಂದ ಮಾತ್ರ ಸಾಧ್ಯ. 800 ವರ್ಷಗಳ ಹಿಂದೆಯೇ ಕರ್ಮ ಸಿದ್ಧಾಂತವನ್ನು ಬಸವಾದಿ ಶರಣರು ತಿರಸ್ಕರಿಸಿದ್ದರು. ಆದರೂ ಇವತ್ತಿನ ಶಿಕ್ಷಕರೂ ಹಣೆಬರಹ ಮುಂತಾದ ಕರ್ಮಸಿದ್ಧಾಂತವನ್ನು ನಂಬುತ್ತಾರೆ. ಇದು ಸರಿಯಲ್ಲ ಎಂದು ತಿಳಿಸಿದರು.

ಸಾವಿತ್ರಿ ಬಾಯಿ ಫುಲೆ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳು ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಲಿ ಎಂದರು.

ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಸಂಘದ ಜೊತೆ ಸೇರಿ ಸುದೀರ್ಘವಾಗಿ ಚರ್ಚಿಸಿದ್ದೇನೆ. ಪದವಿಪೂರ್ವ ಶಿಕ್ಷಕರ ಸಮಸ್ಯೆಗಳು ಅರ್ಥವಾಗಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular