Thursday, November 21, 2024
Google search engine
Homeಜಿಲ್ಲೆಎತ್ತಿನಹೊಳೆ ಯೋಜನೆ-2025ರ ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣ-ಪರಮೇಶ್ವರ್

ಎತ್ತಿನಹೊಳೆ ಯೋಜನೆ-2025ರ ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣ-ಪರಮೇಶ್ವರ್

ಜನತೆಗೆ ನೀರುಣಿಸಲು ತುಮಕೂರು ಜಿಲ್ಲೆಯ ಭಾಗದಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ 2025ರ ಜುಲೈ ಮಾಹೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೊಳಪಡುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹಂಚಿಕೆಯಾದ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ 2.294 ಟಿಎಂಸಿ, ಸಣ್ಣ ನೀರಾವರಿಯ 113 ಕೆರೆಗಳ ಭರ್ತಿ ಮಾಡಲು 3.446 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಎತ್ತಿನ ಹೊಳೆ ಯೋಜನೆಗಾಗಿ ಅಗತ್ಯವಿರುವ 3117.26 ಎಕರೆ ಪ್ರದೇಶದ ಪೈಕಿ ಸ್ವಾಧೀನಪಡಿಸಿಕೊಂಡ 2022 ಎಕರೆ ವಿಸ್ತೀರ್ಣದ ಭೂಮಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಈವರೆಗೂ ಶೇ.80ರಷ್ಟು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಮಾಲೀಕರಿಗೆ ಅವಾರ್ಡ್ ಹಣ ವಿತರಿಸಲು ಸರ್ಕಾರದಿಂದ 1200 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಈಗಾಗಲೇ ಭೂ ಮಾಲೀಕರಿಗೆ 448 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಉಳಿದ 434 ಕೋಟಿ ರೂ. ಗಳು ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿಗಳ ಖಾತೆಯಲ್ಲಿದೆ. ಭೂ ಮಾಲೀಕರಿಂದ ಅಗತ್ಯ ದಾಖಲೆಗಳು ಸಲ್ಲಿಕೆಯಾಗಿ ಅನುಮೋದನೆಗೊಂಡ ನಂತರ ಅವಾರ್ಡ್ ಹಣವನ್ನು ನೀಡಲಾಗುವುದು. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡತೆ ಹಂತ-ಹAತವಾಗಿ ಭೂ ಮಾಲೀಕರಿಗೆ ಹಣವನ್ನು ಮಂಜೂರು ಮಾಡಲಾಗುವುದು. ಯೋಜನೆಗೆ ಅಗತ್ಯವಿರುವ 397 ಕೋಟಿ ರೂ.ಗಳ ಅನುದಾನವನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯ ಮುಖ್ಯ ಕಾಲುವೆ 150 ಕಿ.ಮೀ ಉದ್ದವಿದ್ದು, ಇದರಲ್ಲಿ 102 ಕಿ.ಮೀ ಕಾಲುವೆ ಹಾಗೂ 121 ಕಿ.ಮೀ. ಉದ್ದವಿರುವ ಫೀಡರ್ ಕಾಲುವೆಯ ಕಾಮಗಾರಿಯಲ್ಲಿ 106 ಕಿ.ಮೀ. ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದ ಅವರು, ತುಮಕೂರು, ಹಾಸನ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲೆಯವರೇ ಆದ ನೀರಾವರಿ ತಜ್ಞ ಪರಮಶಿವಯ್ಯ ಅವರು ಸರ್ಕಾರದ ಮುಂದೆ ಪ್ರಸ್ತಾಪಿಸಿ ಇದಕ್ಕೆ ನೇತ್ರಾವತಿ ತಿರುವು ಎಂದು ಹೆಸರಿಟ್ಟಿದ್ದರು ಎಂದು ತಿಳಿಸಿದರು.

ನೇತ್ರಾವತಿ ತಿರುವು ಯೋಜನೆಗೆ ಮಂಗಳೂರಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಯೋಜನೆ ಕೈ ಬಿಡುವ ಸ್ಥಿತಿ ಬಂದಿತ್ತು. ಇದಾದ ಬಳಿಕ ನೀರಾವರಿ ತಜ್ಞರು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಪ್ರದೇಶವನ್ನು ಗುರುತಿಸಿ ಎತ್ತಿನಹೊಳೆ, ಕಾಡುಮನೆ ಹೊಳೆ, ಹೊಂಗದ ಹಳ್ಳ, ಕೇದಿಹೊಳೆಗಳೆಲ್ಲವೂ ಸೇರಿ ಒಂದು ಕಡೆ ಬಂದರೆ 24 ಟಿಎಂಸಿ ನೀರನ್ನು ಒದಗಿಸಬಹುದೆಂದು ಅಂದಾಜಿಸಲಾಗಿತ್ತು ಎಂದು ತಿಳಿಸಿದರು.

ಈ ಯೋಜನೆಯ ಸಾಧಕ-ಬಾಧಕಗಳನ್ನು, ನೀರು ತೆಗೆದುಕೊಳ್ಳುವ ಸಾಧ್ಯ-ಅಸಾಧ್ಯತೆಯನ್ನು ಸರ್ಕಾರದ ಮುಂದಿಟ್ಟಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಅಗತ್ಯವಿರುವ ಹಣಕಾಸು, ತಾಂತ್ರಿಕತೆಯನ್ನು ಅಧ್ಯಯನ ನಡೆಸಿ, 12,912.36 ಕೋಟಿ ರೂ. ಹಣವನ್ನು ಆಯವ್ಯಯದಲ್ಲಿ ಒದಗಿಸಿ, 2014ರ ಫೆಬ್ರವರಿ 17ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದರು ಎಂದು ತಿಳಿಸಿದರು.

ಅಲ್ಲಿಂದ ಪ್ರಾರಂಭವಾದ ಎತ್ತಿನಹೊಳೆ ಯೋಜನೆಗೆ ಮೊದಲು ಚಿಕ್ಕಬಳ್ಳಾಪುರ, ಕೋಲಾರ, ತದನಂತರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಹಾಸನ ಜಿಲ್ಲೆಗಳನ್ನು ಒಳಪಡಿಸಿ ಕಾಮಗಾರಿಯನ್ನು ಅನುಷ್ಟಾನಕ್ಕೆ ತರಲಾಗಿದೆ. ಯೋಜನೆಯ ಮೊತ್ತ 23,251 ಕೋಟಿ ರೂ. ತಲುಪಿದೆ. ಈ ಯೋಜನೆಯನ್ನು ಮುಂಬರುವ 31-3-2027ಕ್ಕೆ ಇಡೀ ಯೋಜನೆ ಸಂಪೂರ್ಣಗೊಳ್ಳಬೇಕು ಎಂಬುದು ಇಲಾಖೆಯ ಗುರಿಯಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular