ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ, ಅದನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡುವ ಉದ್ದೇಶದಿಂದ ಜೆಡಿಯು ಪಕ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಚೇರಿಗಳನ್ನು ತೆರೆದು, ಪಕ್ಷದ ಸಂಘಟನೆಯ ಜೊತೆಗೆ, ಮೌಲ್ಯಾಧಾರಿತ ರಾಜಕಾರಣವನ್ನು ಪರಿಚಯಿಸಲಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಪಟೇಲ್ ತಿಳಿಸಿದ್ದಾರೆ.
ತುಮಕೂರು ನಗರದ ಕೋತಿ ತೋಪಿನಲ್ಲಿರುವ ಶ್ರೀನಿಧಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಜೆಡಿಯು ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಅವರ ಕಾಲದಲ್ಲಿ ಸಣ್ಣ ತಪ್ಪುಗಳು ಕಂಡು ಬಂದರೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ, ತನಿಖೆಯನ್ನು ಎದುರಿಸುತ್ತಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ರೀತಿಯ ಮೌಲ್ಯಾಧಾರಿತ ರಾಜಕಾರಣದ ಹಾದಿಯಲ್ಲಿ ನಡೆಯಬೇಕು. ಮುಡಾ ಹಗರಣದಲ್ಲಿ ಆರೋಪ ಹೊತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದು ಸೂಕ್ತ ಎಂದರು.
ಅಭಿವೃದ್ದಿ ಎಂದರೆ ಕೇವಲ ರಸ್ತೆಗಳು, ಕಟ್ಟಡಗಳ ನಿರ್ಮಾಣವಷ್ಟೇ ಅಲ್ಲ. ಉತ್ತಮ ಮಾನವ ಸಂಬಂಧಗಳನ್ನು ನಿರ್ಮಾಣ ಮಾಡುವುದು ಸಹ ಅಭಿವೃದ್ದಿಯ ಭಾಗವೇ ಆಗಿದೆ. ಆ ಮೂಲಕ ಮನುಷ್ಯರ ನಡುವೆ ಸಹಕಾರ, ಸಹಬಾಳ್ವೆಯನ್ನು ರೂಢಿಸುವುದು ಸಹ ಒಳ್ಳೆಯ ಅಭಿವೃದ್ದಿಯಾಗಿದೆ. ಇದನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಜೆಡಿಯು ರಾಜ್ಯದಾದ್ಯಂತ ಪರಿವರ್ತನೆಯ ಹಾದಿಯನ್ನು ತುಳಿಯಲು ಮುಂದಾಗಿದೆ. ಈಗಾಗಲೇ ದಾವಣಗೆರೆ, ಹುಬ್ಬಳಿಯಲ್ಲಿ ಕಚೇರಿಗಳಿದ್ದು, ತುಮಕೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಚೇರಿ ತೆರೆಯುವ ಕೆಲಸ ಆರಂಭವಾಗಿದೆ. ಇದಕ್ಕೆ ಕರ್ನಾಟಕದ ಜನತೆ ಬೆಂಬಲ ನೀಡಬೇಕೆಂದು ಎಂದು ಮನವಿ ಮಾಡಿದರು.
ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಸುರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್.ರವಿ, ಯಶೋಧ, ಕಲ್ಪನಾ ಗೌಡ, ವಕ್ತಾರ ರಮೇಶಗೌಡ, ರಾಜ್ಯ ಕಾರ್ಯದರ್ಶಿ ಕ್ರಾಂತಿಕಿಡಿ ಗೌಡ, ಮಹಿಳಾ ಘಟಕ ಉಪಾಧ್ಯಕ್ಷೆ ಶಕುಂತಲ ಶೆಟ್ಟಿ, ಶಾಂತಕುಮಾರಿ, ಜಿಲ್ಲಾ ಮುಖಂಡರಾದ ಪರಮೇಶ್ವರಯ್ಯ, ಬಸವರಾಜು ಬ್ಯಾಂಕ್, ರಂಗನಾಥ, ಪ್ರಮೋದ್ ಹಾಜರಿದ್ದರು.