Saturday, December 21, 2024
Google search engine
Homeಮುಖಪುಟಎಲೆ ಮರೆಯ ಹೂವೊಂದು ಉದುರಿಬಿದ್ದಿದೆ- ದಿನೇಶ್ ಅಮೀನ್ ಮಟ್ಟು

ಎಲೆ ಮರೆಯ ಹೂವೊಂದು ಉದುರಿಬಿದ್ದಿದೆ- ದಿನೇಶ್ ಅಮೀನ್ ಮಟ್ಟು

ತುಮಕೂರಿನ ಎಲೆ ಮರೆಯ ಹೂವೊಂದು ಉದುರಿಬಿದ್ದಿದೆ, ಹಕ್ಕಿಯೊಂದು ಹಾಡುವುದನ್ನು ನಿಲ್ಲಿಸಿದೆ.

ಒಳ್ಳೆಯತನವನ್ನಷ್ಟೇ ಬದುಕಿದ್ದ

ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಎಂದರೆ ನನ್ನ ಪಾಲಿಗೆ ಸದಾ ಪರಿಮಳವನ್ನಷ್ಟೇ ಬೀರುವ ಸುಂದರ ಹೂವು ಮತ್ತು ಹಾಡುವ ಹಕ್ಕಿ.

(ಬದುಕಿನಲ್ಲಿ ಆಯ್ಕೆ ಇದ್ದಿದ್ದರೆ ಜಿಎಂಎಸ್ ಒಳ್ಳೆಯ ಸಂಗೀತಗಾರರಾಗುತ್ತಿದ್ದರು, ಅವರಿಗೆ ಸಂಗೀತದ ಬಗ್ಗೆ ಆಸಕ್ತಿಯೂ ಇತ್ತು, ಜ್ಞಾನವೂ ಇತ್ತು)

ಪತ್ನಿಯನ್ನು ಹಿಂದೆಯೇ ಕಳೆದುಕೊಂಡಿದ್ದ ಶ್ರೀನಿವಾಸಯ್ಯನವರು

ಕೆಲ ವರ್ಷಗಳ ಹಿಂದೆ ಒಂದು ಭೀಕರ ಅಪಘಾತದಲ್ಲಿ

ಮಗ ಮತ್ತು ಸೊಸೆಯನ್ನು ಕಳೆದುಕೊಂಡಿದ್ದರು.

ಇದರಿಂದ ಆಘಾತಕ್ಕೀಡಾಗಿದ್ದ

ಶ್ರೀನಿವಾಸಯ್ಯನವರು ಅದರಿಂದ ಹೊರಬರಲು ಚಡಪಡಿಸುತ್ತಿದ್ದರು.

ತಬ್ಬಲಿಯಾಗಿದ್ದ ಇಬ್ಬರು ಮೊಮ್ಮಕ್ಕಳು, ಮಗಳು ಮತ್ತು ಅಳಿಯನೇ ಅವರನ್ನು ನೋಡಿಕೊಳ್ಳುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಗುರುತು ಹಿಡಿಯಲು ಸಾಧ್ಯವಾಗದಷ್ಟು ಅಸೌಖ್ಯದಿಂದ ಬಳಲುತ್ತಿದ್ದ ಜಿಎಂಎಸ್ ಕಳೆದ ರಾತ್ರಿ ನೋವು-ಸಂಕಟಗಳಿಂದ ಬಿಡುಗಡೆಗೊಂಡಿದ್ದಾರೆ.

ಜಿಎಂಎಸ್ ಬಗ್ಗೆ ಬರೆಯಲು ಬಹಳ ಇದೆ, ಮುಂದೆಂದಾದರೂ ಸಾಧ್ಯವಾದರೆ ಬರೆಯೋಣ.

ಕೆಲವರ್ಷಗಳ ಹಿಂದೆ ಜಿಎಂಎಸ್ ಹಿತೈಷಿಗಳಾದ ನಾವೆಲ್ಲರೂ ಸೇರಿ ಒಂದು ಅಭಿನಂದನಾ ಸಮಾರಂಭ ಆಯೋಜಿಸಿದ್ದೆವು. ಆ ದಿನ ಅವರಿಗೆ ಅರ್ಪಿಸಿದ್ದ ಅಭಿನಂದನಾ ಪತ್ರದ

ಬರಹ ಇಲ್ಲಿದೆ:

ಕರುಣೆಯ ಚೈತನ್ಯ:

ಪ್ರೊ. ಜಿ ಎಂ ಶ್ರೀನಿವಾಸಯ್ಯ

ನೂರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಅಧ್ಯಾಪಕ, ವೈಚಾರಿಕತೆ ಮತ್ತು ಪ್ರಗತಿಪರ ನಿಲುವುಳ್ಳವರು, ಸದಭಿರುಚಿ ಮತ್ತು ಸಾಮರಸ್ಯದ ಜಾತ್ಯತೀತ ಸಮಾಜ ನಿರ್ಮಾಣದ ಬಗ್ಗೆ ನಿರಂತರವಾಗಿ ಹಂಬಲಿಸುವ ಸಾಮಾಜಿಕ ಹೋರಾಟಗಾರ, ಕರ್ತವ್ಯ ಪ್ರಜ್ಞೆ, ಸರಳತೆ ಮತ್ತು ಪ್ರಾಮಾಣಿಕತೆಗೆ ನಮ್ಮ ಕಣ್ಣಮುಂದಿನ ಉತೃಷ್ಟ ಮಾದರಿಯಾಗಿರುವ ಪ್ರೊ. ಜಿ ಎಂ ಶ್ರೀನಿವಾಸಯ್ಯ ಅವರನ್ನು ನಾವೆಲ್ಲ ಪ್ರೀತಿಯಿಂದ ಜಿಎಂಎಸ್ ಎಂದೇ ಕರೆಯುತ್ತೇವೆ. ಸ್ವಲ್ಪ ಪ್ರಮಾಣದ ಸಂತನ ಗುಣ, ಸ್ವಲ್ಪ ಗಾಂಧಿ, ಕೊಂಚ ಪ್ರಮಾಣದ ಕ್ರಾಂತಿಕಾರಿ ಮನಸ್ಸು, ಸ್ವಲ್ಪ ಕುವೆಂಪು ವೈಚಾರಿಕತೆ, ಬುದ್ದನ ಕಾರುಣ್ಯ ಇಂಥ ಹಲವು ಚಿಂತನೆಗಳ ಜೋಡಣೆ ಜಿಎಂಎಸ್ ವ್ಯಕ್ತಿತ್ವ. ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಹೆಚ್ಚು ಮೌನಿಯಾಗಿರುವ ಜಿಎಂಎಸ್ ಅವರದು ಸಾತ್ವಿಕ ಪ್ರತಿರೋಧದ ದಾರಿ. ಇವರ ನಡೆ-ನುಡಿಗಳು ನೈತಿಕತೆಯ ಅಭಾವದಿಂದ ಬಳಲುತ್ತಿರುವ ಈ ಹೊತ್ತಿನ ಸಮಾಜಕ್ಕೆ ಅನುಕರಣೀಯ. ಇಂತಹ ಅನೇಕ ಕಾರಣಗಳಿಗೆ ನಮ್ಮ ನಡುವಿನ ಅನೇಕರು ಜಿಎಂಎಸ್ ಅವರನ್ನೇ ತಮ್ಮ ಬದುಕಿನ ಮಾದರಿ ಎಂದು ಸ್ವೀಕರಿಸಿದ್ದಾರೆ. ಸದಾ ಮಾನವೀಯತೆಗಾಗಿ ತುಡಿಯುವ ಜಿಎಂಎಸ್ ಇದೀಗ ತಮ್ಮ ಬದುಕಿನಲ್ಲಿ 85 ವಸಂತಗಳನ್ನು ಪೂರೈಸಿದ್ದಾರೆ. ಕೀರ್ತಿ ಮತ್ತು ಆಸ್ತಿ-ಹಣಗಳ ಬಗ್ಗೆ ಎಂದೂ ವ್ಯಸನ ಪಡದ, ಭವಿಷ್ಯದ ಬಗ್ಗೆ ಆಶಾವಾದಿಯಾಗಿರುವ ಮನಸ್ಸು ಹೆಚ್ಚು ಆರೋಗ್ಯವಾಗಿರುತ್ತದೆ ಎನ್ನುವುದಕ್ಕೆ ನಮ್ಮ ಕಣ್ಣೆದುರಿಗಿರುವ ಸಾಕ್ಷಿ ಜಿಎಂಎಸ್. ಈ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಜಿಎಂಎಸ್ ಅವರನ್ನು ತುಮಕೂರಿನ ಪ್ರಗತಿಪರ ಗೆಳೆಯರು ಹಾಗೂ ವಿವಿಧ ಸಂಘಟನೆಗಳ ಸಂಗಾತಿಗಳು ಗೌರವಿಸಿ ಅರ್ಪಿಸಿದ ಅಭಿನಂದನಾ ಪತ್ರ.

ನಮ್ಮೆಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದ ಹಿರಿಯರಾದ ಜಿಎಂಎಸ್ ಅವರೆ,

ನಿಮ್ಮ ವ್ಯಕ್ತಿತ್ವದಲ್ಲಿರುವ ನೈತಿಕತೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ದತೆಯನ್ನು ಹಲವಾರು ದಶಕಗಳಿಂದ ಈ ಸಮಾಜ ನೋಡುತ್ತಿದೆ. ವಿದ್ಯಾರ್ಥಿಗಳನ್ನು ಸದಭಿರುಚಿಯ ಹಾದಿಗೆ ಕೊಂಡೊಯ್ಯುವ ಅಧ್ಯಾಪಕರಾಗಿ, ಸರ್ಕಾರಿ ಸಂಸ್ಥೆಯನ್ನು ಮಾದರಿ ಎನ್ನುವಂತೆ ಕಟ್ಟುವ ದಕ್ಷ ಆಡಳಿತಗಾರನಾಗಿ, ಸಾಹಿತ್ಯ, ಸಂಗೀತ, ಕ್ರೀಡೆ, ರಂಗಭೂಮಿ ಮುಂತಾದ ಸೃಜನಶೀಲ ಆಸಕ್ತಿಗಳಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡ ನಿಮ್ಮ ಕ್ರಿಯಾಶೀಲತೆಯನ್ನು ನಾವೆಲ್ಲ ಹತ್ತಿರದಿಂದ ನೋಡಿದ್ದೇವೆ, ಕೇಳಿ ತಿಳಿದಿದ್ದೇವೆ. ನಮ್ಮ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ನೀವೊಂದು ಬಹÅದೊಡ್ಡ ಕೊಡುಗೆ ಎಂಬುದು ನಮ್ಮೆಲ್ಲರ ಖಚಿತವಾದ ನಂಬಿಕೆ.

ಕಡುಬಡತನ, ಅನಕ್ಷರತೆ, ಕೀಳರಿಮೆ ಹಾಗೂ ಅವಕಾಶವಿಹೀನತೆಯ ಸಮುದಾಯದ ನಡುವಿನಿಂದ ಬಂದಿರುವ ನಿಮ್ಮ ವೈಯಕ್ತಿಕ ಬದುಕಿನ ಬೆಳವಣಿಗೆ ಅಚ್ಚರಿ ಹುಟ್ಟಿಸುವಂತಹದ್ದು. ಸರ್ಕಾರಿ ದಾಖಲೆಗಳ ಪ್ರಕಾರ ನೀವು ಜನಿಸಿದ್ದು 7 ಸೆಪ್ಟಂಬರ್ 1933. ತುಮಕೂರು ಜಿಲ್ಲೆ ಗುಬ್ಬಿ ನೀವು ಹುಟ್ಟಿದ ಊರು. ಹುಟ್ಟಿದ ಊರಿನ ಬಗ್ಗೆ ಭಾವನಾತ್ಮಕ ಸೆಳೆತವಿರುವ ನಿಮಗೆ, ಈಗಲೂ ‘ಗುಬ್ಬಿ’ ಎಂದರೆ ಹದಿಹರೆಯದವರಂತೆ ಉಲ್ಲಸಿತರಾಗುತ್ತೀರಿ ಎಂಬುದನ್ನು ನಾವು ಕಂಡಿದ್ದೇವೆ. ನಿಮ್ಮ ತಂದೆ: ಮುಕುಂದಪ್ಪ. ತಾಯಿ: ರಂಗಮ್ಮ. ಕ್ಷೌರಿಕ ವೃತ್ತಿಯಿಂದ ಜೀವನ ಮಾಡುತ್ತಿದ್ದ, ಬಡತನವನ್ನೇ ಹಾಸಿ-ಹೊದೆಯುತ್ತಿದ್ದ ಸ್ವಾಭಿಮಾನಿ ಕುಟುಂಬ ನಿಮ್ಮದು. ತಮ್ಮ ಒಂಬತ್ತು ಜನ ಮಕ್ಕಳನ್ನು ತಮ್ಮ ಪಾರಂಪರಿಕ ವೃತ್ತಿಯ ಮೂಲಕವೇ ಸಾಕಿ ಸಲಹಿದ ನಿಮ್ಮ ತಂದೆಯವರ ಬದುಕು ಕೂಡ ಗೌರವಾರ್ಹವಾದದ್ದು. ಸಂತರ ಹಾಗೆ ಅವರಲ್ಲಿದ್ದ ಕಾಯಕ ನಿಷ್ಠೆ ಮತ್ತು ಸರಳ ಬದುಕಿನ ನಡೆ-ನುಡಿಗಳು, ನಮ್ಮ ವಚನಕಾರರ ಆದರ್ಶವನ್ನು ನಮಗೆ ನೆನಪಿಸುತ್ತವೆ. ತಮ್ಮ ಕುಲ ಕಸುಬಿನ ಬಗ್ಗೆ ಎಂದೂ ಕೀಳರಿಮೆಯನ್ನು ಇಟ್ಟುಕೊಳ್ಳದ ಮುಕುಂದಪ್ಪ ಅವರ ಸ್ವಾಭಿಮಾನದ ಬದುಕಿನಿಂದ ಪ್ರಭಾವಿತರಾಗಿರುವ ನೀವೂ ಕೂಡ, ನಿಮ್ಮ ತಂದೆಯ ಹಾಗೆ ಸಾತ್ವಿಕ ಗುಣದವರು ಹಾಗೂ ಎಲ್ಲರಿಗಿಂತಲೂ ಒಂದು ಕೈ ಮಿಗಿಲು ಎನ್ನುವಷ್ಟೇ ಸ್ವಾಭಿಮಾನಿಗಳು.

ನಿಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ನೀವು ಜಾತಿಯ ಕಾರಣಕ್ಕಾಗಿಯೇ ಅನುಭವಿಸಿದ ತಿರಸ್ಕಾರ, ನೋವು ಮತ್ತು ಅವಮಾನಗಳನ್ನು ಮೆಟ್ಟಿನಿಂತು ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಎಂಎ ಪದವೀದರರಾಗಿ ಅಧ್ಯಾಪಕರಾಗಿ ನಿಮ್ಮ ವೃತ್ತಿ ಜೀವನ ಆರಂಭಿಸಿದಿರಿ. ಅಲ್ಲಿಂದ ಆರಂಭವಾದ ನಿಮ್ಮ ಶೈಕ್ಷಣಿಕ ನಡಿಗೆ, ಮುಂದೆ ನೀವು ಪ್ರಾಂಶುಪಾಲರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದಿರಿ. ನೀವು ಎಲ್ಲೆಲ್ಲಿ ಕಾರ್ಯನಿರ್ವಹಿಸಿದ್ದೀರೋ ಅಲ್ಲೆಲ್ಲಾ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ವಿಶ್ವವಿದ್ಯಾಲಯವನ್ನು ಭೌದ್ದಿಕವಾಗಿ ಕಟ್ಟುವ ಕೆಲಸವನ್ನು ಮಾಡಿದಿರಿ. ನಮ್ಮ ಹಳ್ಳಿಗಾಡಿನ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ರೂಪಿಸಿದ್ದು ನಿಮ್ಮ ಅವಧಿಯ ಬಹುದೊಡ್ಡ ಸಾಧನೆಯಾಗಿದೆ. ‘ಜಿಎಂಎಸ್ ಅವರ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸುವ ಅವಕಾಶ ನಮಗೆ ದೊರೆತದ್ದೇ ನಮ್ಮ ಜೀವಿತದ ಭಾಗ್ಯ. ಅವರಿಂದ ನಾವು ಜಾತ್ಯತೀತತೆ, ಶೈಕ್ಷಣಿಕ ಶಿಸ್ತು, ದಕ್ಷ ಆಡಳಿತದ ಬಗ್ಗೆ ಹೆಚ್ಚು ಕಲಿತೆವು’ ಎಂದು ಹೇಳುವ ಎಷ್ಟೋ ಜನ ಹಿರಿಯ ಅಧ್ಯಾಪಕರು ನಮ್ಮ ನಡುವೆ ಇದ್ದಾರೆ. ಅಸಹಾಯಕ ಸಮುದಾಯಗಳಿಗೆ ಶಿಕ್ಷಣ ಮತ್ತು ಅವಕಾಶಗಳು ದೊರೆತರೆ ಅವರೆಲ್ಲ ಹೇಗೆ ಉಜ್ವಲವಾಗಿ ಬೆಳೆಯಬಲ್ಲರು ಎಂಬುದಕ್ಕೆ ಇಂದು ನಮ್ಮ ನಡುವಿರುವ ನೀವೇ ಸಾಕ್ಷಿ.

ತುಮಕೂರಿನ ಅನೇಕ ಸಂಘಟನೆಗಳು, ಪ್ರಗತಿಪರ ಮನಸ್ಸುಗಳು ಸಂಘಟಿತವಾಗಿ ನಡೆಸಿದ ನಿರಂತರ ಹೋರಾಟದ ಫಲವಾಗಿ ತುಮಕೂರು ವಿಶ್ವವಿದ್ಯಾಲಯ ತಲೆಯೆತ್ತಿ ನಿಂತಿದೆ. ಈ ಪ್ರಯತ್ನದಲ್ಲಿ ನಿಮ್ಮ ಹÉÇೀರಾಟ ಮತ್ತು ಅವಿರತ ಪ್ರಯತ್ನಗಳೂ ಕೂಡ ಪ್ರಮುಖವಾಗಿ ಸೇರಿವೆ. ಅದನ್ನು ತುಮಕೂರಿನ ಚರಿತ್ರೆ ಮರೆಯಲಾರದು. ಇಂದಿಗೂ ನೀವು ತುಮಕೂರಿನ ಸಾರ್ವಜನಿಕ ಜೀವನದಲ್ಲಿರುವ ಕುಂದುಕೊರತೆಗಳ ಬಗ್ಗೆ, ಅಸಹಾಯ ಜನವರ್ಗಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹರೆಯದ ಕ್ರಾಂತಿಕಾರಿಯಂತೆ ಹೋರಾಡುತ್ತಲೇ ಇದ್ದೀರಿ. ಹೀಗಾಗಿ ಹೋರಾಟಗಾರರ ಹಿರಿಯ ಸಂಗಾತಿಯಾಗಿ ಕ್ರಿಯಾಶಾಲಿಯಾಗಿರುವ ನಿಮ್ಮ ಬೌದ್ದಿಕ ಮತ್ತು ದೈಹಿಕ ಚೈತನ್ಯ ಅನುಕರಣೀಯ. ತುಮಕೂರಿನಲ್ಲಿ ಹಿರಿಯ ರಾಜಕಾರಣಿ ಶ್ರೀ ವೈ ಕೆ ರಾಮಯ್ಯ ಅವರು ಸ್ಥಾಪಿಸಿದ ‘ವಿಶ್ವಮಾನವ ವೇದಿಕೆ’ಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೀರಿ. ಇದೀಗ ‘ವಿಶ್ವಮಾನವ ವೇದಿಕೆ’ಯನ್ನೇ ‘ಕುವೆಂಪು ವಿಚಾರ ವೇದಿಕೆ’ಯನ್ನಾಗಿ ಪರಿವರ್ತಿಸಿ, ಪ್ರತಿವರ್ಷ ಕುವೆಂಪು ಜನ್ಮ ದಿನದಂದು ನಮ್ಮ ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಕುವೆಂಪು ಸಾಹಿತ್ಯ ಕುರಿತು ವಿಮರ್ಶಕರು, ಲೇಖಕರು ಹಾಗೂ ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬರುತ್ತಿದ್ದೀರಿ. ಹೀಗೆ ವಿದ್ಯಾರ್ಥಿ ಸಮುದಾಯವನ್ನು ಸಮಾಜ ಘಾತುಕ ಶಕ್ತಿಗಳಿಂದ ಬಿಡುಗಡೆಗೊಳಿಸಲು, ಅವರನ್ನು ವೈಚಾರಿಕವಾಗಿ ರೂಪಿಸುವ ನಿಮ್ಮ ಪ್ರಯತ್ನ ಉಜ್ವಲವಾದದ್ದು.

ನಿಮ್ಮಲ್ಲಿರುವ ಪ್ರತಿಭೆಗೆ, ವಿದ್ವತ್ತಿಗೆ ನೀವು ಒಳ್ಳೆಯ ಇತಿಹಾಸಕಾರನಾಗಬಹುದಿತ್ತು! ಆದರೆ ಏಕೋ ನೀವು ಬರವಣಿಗೆಯ ಕಡೆ ಮುಖ ಹೊರಳಿಸಲಿಲ್ಲ! ಅಷ್ಟರಮಟ್ಟಿಗೆ ನಮಗೆ ನಿರಾಸೆಯಾಗಿದೆ. ಆದರೆ ನಿಮ್ಮ ಬದುಕು ಮತ್ತು ನಿಮ್ಮ ವೈಚಾರಿಕ ಚಿಂತನೆ ಮತ್ತು ನಡವಳಿಕೆ ಈ ಸಮಾಜಕ್ಕೆ ದೊಡ್ಡ ಪಾಠವನ್ನೇ ಹೇಳುತ್ತದೆ. ಸಮಾಜ ಪರಿವರ್ತನೆಯ ಬಗ್ಗೆ ಆಳವಾದ ನಂಬಿಕೆಯಿರುವ ಸಾಮಾಜಿಕ ಪ್ರಜಾಪ್ರಭುತ್ವವಾದಿ ನೀವು.

ವೈಯಕ್ತಿ ಬದುಕಿನ ಬಗ್ಗೆ ಹಪಹಪಿಸುವ ಗುಣ ನಿಮ್ಮದ್ದಲ್ಲ. ತೋರಿಕೆ, ಆಡಂಬರ, ನೇರ ಹÉÇಗಳಿಕೆ, ಸನ್ಮಾನ, ಪ್ರಶಸ್ತಿ ಮುಂತಾದುವುಗಳ ಬಗ್ಗೆ ನಿಮಗೆ ಒಲವಿಲ್ಲ ಎಂಬುದನ್ನೂ ನಾವು ತಿಳಿದಿದ್ದೇವೆ. ಜಾತಿವಾದಿಗಳು, ಕೋಮುವಾದಿಗಳ ಹಾಗೂ ಭ್ರಷ್ಟರ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವವರು ನೀವು. ಸಂಕೋಚ, ಹಿಂಜರಿಕೆ ನಿಮ್ಮ ವ್ಯಕ್ತಿತ್ವದ ಮೂಲಗುಣ. ‘ಹೊನ್ನಿನೊಳಗೊಂದರೆಯ, ಸೀರೆಯೊಳಗೊಂದೆಳೆಯ / ಇಂದಿಂಗೆ ನಾಂಳಿಂಗೆ ಬೇಕೆಂದನಾದರೆ, ನಿಮ್ಮಾಣೆ! ನಿಮ್ಮ ಪ್ರಮಥರಾಣೆ’ ಎನ್ನುವ ಬಸವ ಮಾರ್ಗದ ಪಥಿಕ ನೀವು. ಸಜ್ಜನರು, ಜಾತ್ಯತೀತರು, ಸಮಷ್ಠಿಯ ಹಿತಕ್ಕಾಗಿ ಧ್ಯಾನಿಸುವ, ಸಮಾಜ ಪರಿವರ್ತನಗೆ ಕೈ ಜೋಡಿಸುವ ವ್ಯಕ್ತಿಗಳೇ ಇಂದು ನಮ್ಮಲ್ಲಿ ವಿರಳವಾಗುತ್ತಿದ್ದಾರೆ. ನಿಮ್ಮಂಥ ಸಾತ್ವಿಕ ವ್ಯಕ್ತಿಗಳ ಗುಣಗಳನ್ನು ನಮ್ಮ ಕಣ್ಣಮುಂದಿರುವ ತಲೆಮಾರಿಗೆ ನಾವು ಪರಿಚಯಿಸದಿದ್ದರೆ, ನಾವು ಸಮಾಜಕ್ಕೆ ದ್ರೋಹ ಬಗೆದಂತೆ. ಆದ್ದರಿಂದ ಇದರಲ್ಲಿ ನಮ್ಮ ಸ್ವಾರ್ಥವೂ ಇದೆ. ನಿಮ್ಮ ಕನಸು, ನಿಮ್ಮ ಆದರ್ಶದ ಬೀಜಗಳು ಮುಂದಿನ ತಲೆಮಾರಿಗೆ ಫಲ ನೀಡುವಂತಾಗಲಿ. ಅದಕ್ಕಾಗಿಯೇ ಈ ಪ್ರೀತಿಯ ಸಮಾರಂಭ.

ನೀವು ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕು. ಹದತಪ್ಪಿರುವ ಈ ಸಮಾಜಕ್ಕೆ ನಿಮ್ಮಂಥವರ ಮಾರ್ಗದರ್ಶನ ಅವಶ್ಯವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular