ರಾಜ್ಯದಲ್ಲಿ ಶಾಲೆಗಳನ್ನು ಸ್ಯಾನಿಟೈಸ್ ಮಾಡಿದ ಒಂದು ವಾರದ ಬಳಿಕ ತರಗತಿಗಳನ್ನು ಆರಂಭಿಸಲಾಗುವುದು. ಪೋಷಕರು ಮತ್ತು ಶಾಲೆಗಳ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಗಸ್ಟ್ 23ರಿಂದ ತರಗತಿ ಆರಂಭವಾಗಲಿದೆ. 1 ರಿಂದ 8 ನೇ ತರಗತಿಗೆ ಶಾಲೆ ಆರಂಭಿಸುವ ಬಗ್ಗೆ ಮಾರ್ಗಸೂಚಿ ಸಿದ್ದವಿದ್ದು, ಪಾಸಿಟಿವಿ ರೇಟ್ ಹೆಚ್ಚಿರುವ ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಿಸುವುದು ವಿಳಂಬವಾಗಲಿದೆ ಎಂದು ಹೇಳಿದರು.
ಉತ್ತರ ಮತ್ತು ಕರ್ನಾಟಕದ ಗಡಿ ರಾಜ್ಯಗಳಲ್ಲಿ ಕೊರೊನ ಸೋಂಕು ಹೆಚ್ಚಿರುವುದರಿಂದ ಗಡಿಭಾಗದಲ್ಲಿ ಕಠಿಣ ನಿಯಮಗಳು ಅನ್ವಯವಾಗಲಿವೆ. ಮಹಾರಾಷ್ಟ್ರ ಮತ್ತು ಕೇರಳ ಗಡಿಗಳಲ್ಲಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುವುದು. ಕೊರೊನ ಸೋಂಕು ಕಂಡು ಬಂದ ಶಾಲೆಗಳನ್ನು ಕೂಡಲೇ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಕೋವಿಡ್-19 ನಿಯಂತ್ರಣದ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ ‘ಡೆಲ್ಟಾ ಪ್ಲಸ್ ಪತ್ತೆ ಕ್ರಮ ಕೈಗೊಳ್ಳುವ ಜೊತೆಗೆ ಮೂರು ವಾರಗಳಲ್ಲಿ ಆರು ಜಿನೋಮಾ ಟೆಸ್ಟ್ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡುತ್ತೇವೆ ಎಂದರು.
ಚಾಮರಾಜನಗರ, ಶಿವಮೊಬ್ಬ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು. ಈ ಲ್ಯಾಬ್ ಗಳ ಮೂಲಕ ಡೆಲ್ಟಾ ಪ್ಲಸ್ ಸೋಂಕಿತರನ್ನು ಗುರುತಿಸುವ ಕೆಲಸ ನಡೆಯುತ್ತದೆ. ರಾಜ್ಯಕ್ಕೆ 68 ಲಕ್ಷ ಕೊರೊನ ಲಸಿಕೆ ಪೂರೈಕೆಯಾಗಿದೆ. ಈ ತಿಂಗಳಾಂತ್ಯಕ್ಕೆ ಹೆಚ್ಚಿನ ಲಸಿಕೆಯನ್ನು ತರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.