ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಆನಂದರಾಯನ ಗುಡ್ಡದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರು ರಸ್ತೆಯ ದಂಡಿನ ಮಾರಮ್ಮ ದೇವಸ್ಥಾನದ ಸಮೀಪ ಇರುವ ಆನಂದರಾಯನ ಗುಡ್ಡದಲ್ಲಿ ಬಂಡೆಯ ಮೇಲೆ ನಿಂತಿರುವ ಭಂಗಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಶುಕ್ರವಾರ ಆಗಿದ್ದರಿಂದ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಬರುವ ಭಕ್ತಾಧಿಗಳು ನಂದಿನಿ ಸೂಪರ್ ಮಾರ್ಟ್ ಮತ್ತು ಹೋಂಡಾ ಶೋ ರೂಂ ಮುಂಭಾಗ ನಿಂತು ಚಿರತೆಯನ್ನು ನೋಡಿ ಭೀತರಾಗಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಸಂಜೆ ಸಮಯದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಈ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಈ ಚಿರತೆಯು ಕಲ್ಲು ಗುಂಡಿನ ಸಮೀಪ ಮರಿಗಳನ್ನು ಹಾಕಿದ್ದು ಆದ್ದರಿಂದ ಪ್ರತಿ ದಿನ ಇದೇ ಸ್ಥಳದಲ್ಲಿ ಕಂಡು ಬರುತ್ತಿದೆ ಎಂದು ನಾಗರೀಕರು ತಿಳಿಸಿದ್ದಾರೆ.
ಈ ಬೆಟ್ಟದಲ್ಲಿ ಮೂರು ಚಿರತೆಗಳಿದ್ದು, ಆಗಾಗ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತವೆ. ಅಲ್ಲದೇ ಬೆಳಗಿನ ಜಾವ ಇದೇ ರಸ್ತೆಯಲ್ಲಿ ಸಾರ್ವಜನಿಕರು ವಾಯುವಿಹಾರಕ್ಕೆ ಹೋಗುತ್ತಾರೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಒತ್ತಾಯಿಸಿದ್ದಾರೆ.