ಮಂಗಳಮುಖಿಯರು ಮನುಷ್ಯರಲ್ಲವೇ? ಯಾಕೆ ಈ ಸಮಾಜ ನಮ್ಮನ್ನು ಇಷ್ಟೊಂದು ಕೀಳಾಗಿ ನಡೆಸಿಕೊಳ್ಳುತ್ತಿದೆ. ಪದೇಪದೇ ನಮ್ಮ ಮೇಲೆ ಲೈಂಗಿಕ ದೌರ್ಜನಗಳು ನಡೆಯುತ್ತಲೇ ಇವೆ. ದೌರ್ಜನ್ಯ ಎಸುಗುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಂಗಳ ಮುಖಿಯರಾದ ನಾಜೀಯ, ಕರೀನಾ ಒತ್ತಾಯಿಸಿದರು.
ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಆದಿಲ್ ಎಂಬಾತ ಮಂಗಳಮುಖಿ ಹನಿಷಾಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ನವೀನ್ ಗೌಡ ಅವರನ್ನ ಭೇಟಿ ಮಾಡಿದ ಮಂಗಳಮುಖಿಯರು ಹಲ್ಲೆಗೊಳಗಾದ ಹನಿಷಾ ಕುಟುಂಬಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು. ಪ್ರಕರಣದ ಮತ್ತಿಬ್ಬರು ಆರೋಪಿಗಳಿದ್ದು ಅವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಮಂಗಳಮುಖಿಯ ಮೇಲೆ ನಡೆದ ಚಾಕು ಇರಿತ ಘಟನೆ ಖಂಡಿಸಿ ಮಾತನಾಡಿದ ನಾಜಿಯ ಮತ್ತು ಕರೀನಾ, ಆದಿಲ್ ಮತ್ತು ಅನಿಷಾ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದಿಲ್ ಅನಿಷಾಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದನು. ಆಕೆ ಫೋನ್ ಸ್ವೀಕರಿಸದಿದ್ದರೆ ನಮಗೂ ಫೋನ್ ಮಾಡಿ ಹಿಂಸೆ ನೀಡುತ್ತಿದ್ದ. ಈತನ ವರ್ತನೆಯ ವಿರುದ್ಧ ಪೊಲೀಸರ ಗಮನಕ್ಕೂ ತಂದಿದ್ದೆವು. ಮೊದಲೇ ಕ್ರಮ ಕೈಗೊಂಡಿದ್ದರೆ ಇಂದು ಈ ರೀತಿ ಘಟನೆ ನಡೆಯುತ್ತಿರಲಿಲ್ಲ ಎಂದರು.
ಮಂಡ್ಯ ಪಟ್ಟಣದಿಂದ ಕೆಲವು ಹುಡುಗರು ಬಿಜಿನೆಸ್ ಮಾಡುತ್ತೇವೆ ಎಂದು ನೆಪ ಹೇಳಿಕೊಂಡು ಕುಣಿಗಲ್ ಪಟ್ಟಣಕ್ಕೆ ಬಂದು ಮಂಗಳಮುಖಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಅಂಥವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.