ಪ್ರತಿ ಗುತ್ತಿಗೆ ಹಣದ ಪಾವತಿಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲೂ ಲಂಚ ಶೇ40 ಕ್ಕಿಂತ ಮಿತಿ ಮೀರಿದೆ ಎಂದು ಗುತ್ತಿಗೆದಾರರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ್ದ ಸಿ.ಎಂ. ಮತ್ತು ಡಿ.ಸಿ.ಎಂ ಅವರು, ತಮ್ಮದೇ ಸರ್ಕಾರ ಬಂದು ಒಂದುವರೆ ವರ್ಷ ಕಳೆದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಬದಲಿಗೆ ಹೆಚ್ಚಾಗಿದೆ. ಇದರಿಂದ ಗುತ್ತಿಗೆದಾರರು, ಸಾರ್ವಜನಿಕರು ನಲುಗಿ ಹೋಗಿದ್ದಾರೆ. ಹಿಂದೆ ಗುತ್ತಿಗೆದಾರರು ಕೊಟ್ಟಷ್ಟು ತೆಗೆದುಕೊಂಡು ಬಿಲ್ ಮಾಡುತ್ತಿದ್ದರು. ಇಂದು ಇಂತಿಷ್ಟೇ ಕೊಡಬೇಕು ಎಂದು ತಾಕೀತು ಮಾಡುತ್ತಾರೆ. ಇದರಿಂದ ಹಲವಾರು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಕೆಲಸ ಸ್ಥಗಿತ ಮಾಡಿ ಹೋರಾಟ ನಡಸಲಾಗುವುದು ಎಂದು ಎ.ಡಿ.ಬಲರಾಮಯ್ಯ ಎಚ್ಚರಿಸಿದರು.
ಮೊದಲು ಹಿರಿತನದ ಆಧಾರದಲ್ಲಿ ಎಲ್.ಓ.ಸಿ. ಬಿಡುಗಡೆ ಮಾಡುತ್ತಿದ್ದರು.ಆದರೆ ಈಗ ಯಾರು ಕೈ ಬೆಚ್ಚಗೆ ಮಾಡಿದರೂ ಅವರಿಗೆ ಬಿಲ್ ಪಾವತಿಸುವಂತೆ ಸಚಿವರು, ಶಾಸಕರು ಒತ್ತಡ ತರುತ್ತಾರೆ. ಜೆಜೆಎಂ ಕಾಮಗಾರಿಯ ಹಣ ಪಡೆಯಲು ಜಿ.ಪಂ. ಸಿಇಓ ಅವರಿಗೆ ಇಂತಿಷ್ಟು ಲಂಚವನ್ನು ಇಂಜಿನಿಯರ್‌ಗಳ ಮೂಲಕ ತಲುಪಿಸಬೇಕು.ಇದಕ್ಕೆ ಚಿಕ್ಕನಾಯಕಹಳ್ಳಿಯಲ್ಲಿ ನಡೆದ ಲೋಕಾಯುಕ್ತ ದಾಳಿಯೇ ಸಾಕ್ಷಿ ಎಂದರು.
ಜಿ.ಎಸ್.ಟಿ ಗುತ್ತಿಗೆದಾರರ ಜೀವ ಕಸಿಯುತ್ತಿದೆ. 2012-13ರಿಂದ ನಡೆದ ಕಾಮಗಾರಿಗಳಿಗೂ ಜಿ.ಎಸ್.ಟಿ ವಿಧಿಸುತ್ತಿದ್ದಾರೆ. 2018ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದಿದೆ. ಆದರೆ ಅದರ ಹಿಂದೆ ಮಾಡಿದ ಕೆಲಸಗಳಿಗೂ ಜಿ.ಎಸ್.ಟಿ ವಿಧಿಸಿ, ಕಟ್ಟದ ಗುತ್ತಿಗೆದಾರರ ಖಾತೆಗಳನ್ನೇ ರದ್ದು ಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೀತಿ, ರಾಜ್ಯ ಸರ್ಕಾರವೂ ಬಿಡುಗಡೆ ಮಾಡಿದಷ್ಟು ಅನುದಾನಕ್ಕೆ ಮಾತ್ರ ಟೆಂಡರ್ ಕರೆಯಲಿ, ಅದನ್ನು ಬಿಟ್ಟು ಒಂದು ಕೋಟಿಗೆ ಟೆಂಡರ್ ಕರೆದು, 10 ಲಕ್ಷ ಹಣ ಬಿಡುಗಡೆ ಮಾಡುತ್ತಾರೆ. ಇದರಿಂದ ಸಾಲ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರ ಪರಿತಪಿಸಬೇಕಾಗುತ್ತದೆ ಎಂದು ಎಂದು ವಿಷಾದಿಸಿದರು.
ರಾಜ್ಯ ಸರ್ಕಾರ ಪ್ರತಿ ಎಂ.ಎಲ್.ಎ ಕ್ಷೇತ್ರಗಳಿಗೆ ಇಪ್ಪತೈದು ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಟೆಂಡರ್ ಕರೆದಿದ್ದಾರೆ. ಆದರೆ ಹಣ ಬಿಡುಗಡೆಯಾಗಿರುವುದು ಕಡಿಮೆ. ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಬಿಲ್‌ಗಾಗಿ ವರ್ಷಗಟ್ಟಲೆ ಕಾಯಬೇಕಿದೆ. ರಾಜ್ಯ ಸರ್ಕಾರ ಪ್ಯಾಕೆಜ್ ಪದ್ದತಿಯನ್ನು ರದ್ದು ಮಾಡಬೇಕು ಎಂದು ಬತ್ತಾಯಿಸುತ್ತಿದೇವೆ, ಅಧಿಕಾರಿಗಳು ಶಾಸಕರ ಕೈಗೊಂಬೆಗಳು ಆಗಿದ್ದಾರೆ. ಈ ಸರ್ಕಾರದಲ್ಲೂ ನಲವತ್ತು ಪರ್ಸೆಂಟ್ ಲಂಚ ಕೊಟ್ಟರೆ ಮಾತ್ರ ಬಿಲ್ಲುಗಳು ಆಗುತ್ತಿವೆ ಎಂದು ಸರ್ಕಾರದ ವಿರುದ್ದ ಆರೋಪ ಮಾಡಿದರು.
ಚಿಕ್ಕನಾಯಕನಹಳ್ಳಿ ಯಲ್ಲಿ ಜೆಜೆಎಂ ಬಿಲ್ಲು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಲೋಕಯುಕ್ತಕ್ಕೆ ಇಂಜನಿಯರ್ ಗಳನ್ನು ಹಿಡಿದು ಕೊಡಬೇಕಾಗಿ ಬಂತು, ಇಂಜನಿಯರ್ ಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಮುಲಾಜು ಇಲ್ಲದೆ ಲೋಕಯುಕ್ತದಲ್ಲಿ ಕೇಸು ಹಾಕಿಸಿ ಗುತ್ತಿಗೆದಾರರ ಸಂಘ ಬೆಂಬಲಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 31 ಸಾವಿರ ಕೋಟಿ ರೂಗಳ ಬಾಕಿ ಬರಬೇಕು.ಪಿ ಆರ್ ಇ ಡಿ 2500 ಕೋಟಿ, ಕ್ರೇಡಲ್ 1000, ಎಮ್ ಐ 2900, ಎಸ್ ಎಚ್ ಡಿ ಪಿ 2000, ಪಿಡಬ್ಲ್ಯೂಡಿ 9000 ಕೋಟಿ ಸೇರಿ ವಿವಿಧ ಇಲಾಖೆಗಳ 31 ಸಾವಿರ ಕೋಟಿ ರೂಪಾಯಿಗಳ ಬಿಲ್ಲುಗಳು ಬಾಕಿ ಇವೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಸಂಘದಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗುತ್ತಿಗೆದಾರ ಚಿಕ್ಕೆಗೌಡ, ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‌ಕುಮಾರ್, ಸಿ.ಆರ್.ಉಮೇಶ್ ಹಾಜರಿದ್ದರು.